ಅಕ್ಷಯ ಪಾತ್ರೆ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾದರೆ ಅದಕ್ಕೆ ಶಿಕ್ಷೆಯನ್ನು ಪಡೆಯಲು ಸಿದ್ಧ ಎಂದು ಇಸ್ಕಾನ್ ಅಧ್ಯಕ್ಷ ಮಧುಪಂಡಿತ್ ದಾಸ್ ಸ್ಪಷ್ಟಪಡಿಸಿದ್ದಾರೆ.
ಅಕ್ಷಯ ಪಾತ್ರೆ ಬಿಸಿಯೂಟದಲ್ಲಿ ಅವ್ಯವಹಾರ ನಡೆದಿದೆ ಎಂಬ ಕುರಿತು ವಿಧಾನಸಭೆಯಲ್ಲಿ ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯನ್ನು ರಚಿಸಲಾಗಿರುವ ಕುರಿತು ಮಧುಪಂಡಿತ್ ದಾಸ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದರು.
ಇಸ್ಕಾನ್ ಸಂಸ್ಥೆಯಿಂದ ನಡೆಸಲಾಗುವ ಅಕ್ಷಯ ಪಾತ್ರೆ ಯೋಜನೆ ಒಂದು ಪ್ರತ್ಯೇಕ ಪ್ರತಿಷ್ಠಾನದಿಂದ ನಡೆಯುವ ಯೋಜನೆಯಾಗಿದ್ದು, ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಲಹಾ ಸಮಿತಿ ಇದೆ. ಎಲ್ಲವೂ ನ್ಯಾಯಬದ್ಧವಾಗಿ ನಡೆಯುತ್ತಿದ್ದು, ಮಕ್ಕಳ ಬಿಸಿಯೂಟ ಯೋಜನೆಯಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು.
ಈ ಬಗ್ಗೆ ತನಿಖೆಗೆ ಸದನ ಸಮಿತಿ ನೇಮಕ ಮಾಡಿರುವ ಬಗ್ಗೆ ತಮಗೆ ಅತೀವ ನೋವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ತಾವು ತನಿಖೆಗೆ ಸಿದ್ಧವಿದ್ದು, ಅವ್ಯವಹಾರ ನಡೆದಿರುವುದು ಸಾಬೀತಾದರೆ ಶಿಕ್ಷೆ ಅನುಭವಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.