ರಾಜ್ಯದಲ್ಲಿ ಆಗೋಸ್ಟ್ 18ರಂದು ನಡೆಯುವ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು, ಪಕ್ಷೇತರರು ಸೇರಿದಂತೆ ಒಟ್ಟು 108 ನಾಮಪತ್ರ ಸಲ್ಲಿಕೆಯಾಗುವ ಮೂಲಕ ಚುನಾವಣಾ ಅಖಾಡ ರಂಗೇರಿದೆ.
ಗೋವಿಂದರಾಜನಗರ ಕ್ಷೇತ್ರಕ್ಕೆ 38, ಚನ್ನಪಟ್ಟಣ-17, ರಾಮನಗರ-21, ಚಿತ್ತಾಪುರ್-11 ಹಾಗೂ ಕೊಳ್ಳೇಗಾಲಕ್ಕೆ 21 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಾಗುವ ಮೂಲಕ ಐದು ಕ್ಷೇತ್ರಗಳ ಉಪಚುನಾವಣೆಗೆ ಕೊನೆಗಳಿಗೆಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ನಡೆಯಿತು.
ಆಡಳಿತಾರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್‌ಪಿ ಪಕ್ಷಕ್ಕೆ ಸೇರಿದ ಘಟಾನುಘಟಿಗ ಅಭ್ಯರ್ಥಿಗಳು ಸೇರಿದಂತೆ ಕೆಲವು ಪಕ್ಷೇತರರು ಇಂದು ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ನಾಮಪತ್ರ ಸಲ್ಲಿಸಿದರು.
ಗೋವಿಂದರಾಜನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಿಯಕೃಷ್ಣ, ಕೊಳ್ಳೇಗಾಲ ಕ್ಷೇತ್ರದಿಂದ ಎಸ್.ಜಯಣ್ಣ ನಾಮಪತ್ರವನ್ನು ತಮ್ಮ ಅಪಾರ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು. ಅದೇ ರೀತಿ ಬಿಜೆಪಿಯಿಂದ ರಾಮನಗರದಿಂದ ನಾರಾಯಣಗೌಡ, ಕೊಳ್ಳೇಗಾಲದಿಂದ ನಂಜುಂಡಸ್ವಾಮಿ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್‌ನಿಂದ ರಾಮನಗರ ಕ್ಷೇತ್ರಕ್ಕೆ ಕೆ.ರಾಜು, ಕೊಳ್ಳೇಗಾಲದಿಂದ ಬಾಲರಾಜು, ಗೋವಿಂದರಾಜನಗರದಿಂದ ರಂಗೇಗೌಡ ನಾಮಪತ್ರ ಸಲ್ಲಿಸಿದರು.
ಬಿಎಸ್ಪಿಯಿಂದ ಕೊಳ್ಳೇಗಾಲ ಕ್ಷೇತ್ರಕ್ಕೆ ಡಾ.ಸುಭಾಷ್ ಭರಣಿ, ಚಿತ್ತಾಪುರ ಕ್ಷೇತ್ರದಿಂದ ಅಯ್ಯಪ್ಪ, ರಾಮನಗರದಿಂದ ಮಲ್ಲಿಕಾರ್ಜುನಯ್ಯ, ಚನ್ನಪಟ್ಟಣದಿಂದ ಸುಜೀವನ್ ಕುಮಾರ್, ಗೋವಿಂದರಾಜನಗರದಿಂದ ಶಂಶುದ್ ಹುದಾ ಅಖಾಡಕ್ಕಿಳಿದಿದ್ದಾರೆ.
ಉಳಿದಂತೆ ಕಾಂಗ್ರೆಸ್‌ನಿಂದ ರಾಮನಗರ ಕ್ಷೇತ್ರಕ್ಕೆ ಸಿ.ಎಂ.ಲಿಂಗಪ್ಪ, ಚಿತ್ತಾಪುರ ಕ್ಷೇತ್ರದಿಂದ ಪ್ರಿಯಾಂಕ ಖರ್ಗೆ, ಚನ್ನಪಟ್ಟಣದಿಂದ ಟಿ.ಕೆ.ಯೋಗೀಶ್, ಬಿಜೆಪಿಯಿಂದ ಗೋವಿಂದರಾಜನಗರ ಕ್ಷೇತ್ರಕ್ಕೆ ಸಚಿವ ಸೋಮಣ್ಣ, ಚನ್ನಪಟ್ಟಣದಿಂದ ಸಿ.ಪಿ.ಯೋಗೀಶ್ವರ್, ಚಿತ್ತಾಪುರದಿಂದ ವಾಲ್ಮೀಕಿ ನಾಯಕ ಈಗಾಗಲೇ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್‌ನಿಂದ ಚನ್ನಪಟ್ಟಣ ಕ್ಷೇತ್ರದಿಂದ ಅಶ್ವತ್ಥ್, ಚಿತ್ತಾಪುರದಿಂದ ಬಸವರಾಜ ಬೆಣ್ಣೂರ್ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಜು.30ರಂದು ನಡೆಯಲಿದೆ. ಆಗೋಸ್ಟ್ 18ರಂದು ಮತದಾನ ನಡೆಯಲಿದ್ದು, ಆ.21ರಂದು ಮತ ಎಣಿಕೆ ನಡೆಯಲಿದೆ.