ಮಾಜಿ ಶಾಸಕರು ಸೇರಿದಂತೆ ವಿಧಾನಮಂಡಲದ ಉಭಯ ಸದನಗಳ ಶಾಸಕರ ಭತ್ಯೆ, ವೇತನಗಳು ಹೆಚ್ಚಾಗಿವೆ. ಸಭಾಪತಿ ಮತ್ತು ಸಭಾಧ್ಯಕ್ಷರ ವಾರ್ಷಿಕ ಆತಿಥ್ಯ ಭತ್ಯೆಯನ್ನೂ ಹೆಚ್ಚಿಸುವ ಮೂಲಕ ಬಂಪರ್ ಕೊಡುಗೆ ನೀಡಿದೆ.
ಶಾಸಕರ ವೇತನವನ್ನು 8ಸಾವಿರದಿಂದ 10ಸಾವಿರಕ್ಕೆ ಏರಿಸಲಾಗಿದೆ. ಅಂಚೆವೆಚ್ಚವನ್ನು 1ಸಾವಿರದಿಂದ 4ಸಾವಿರ ರೂ.ಗೆ, ಶಾಸಕರ ದೂರವಾಣಿ ಭತ್ಯೆಯನ್ನು 7.5ಸಾವಿರದಿಂದ 10ಸಾವಿರಕ್ಕೆ ಏರಿಕೆ. ಅಲ್ಲದೇ ಶಾಸಕರ ನಿವೃತ್ತಿ ವೇತನದಲ್ಲಿ 3ಪಟ್ಟು ಹೆಚ್ಚಳ ಮಾಡಿದ್ದು, ಪ್ರತಿ ತಿಂಗಳಿಗೆ 15ಸಾವಿರ ರೂ.ನಿವೃತ್ತಿ ವೇತನ. ಶಾಸಕರ ಸಹಾಯಕರ ವೇತನವನ್ನು 5ಸಾವಿರ ರೂಪಾಯಿಗೆ ಏರಿಸಲಾಗಿದೆ.
ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ ಸರ್ಕಾರದ ಮುಖ್ಯ ಸಚೇತಕರ ಸ್ಥಾನಮಾನ ನೀಡುವುದರ ಜತೆಗೆ ಅವರ ವೇತನ ಮತ್ತು ಭತ್ಯೆಗಳಲ್ಲೂ ಏರಿಕೆ ಮಾಡಲಾಗಿದೆ. ಈ ಎಲ್ಲ ಹೆಚ್ಚಳಕ್ಕೆ ಅವಕಾಶ ಮಾಡಿಕೊಡುವ ಕರ್ನಾಟಕ ವಿಧಾನ ಮಂಡಲದವರ ವೇತನ, ನಿವೃತ್ತಿ ವೇತನ, ಭತ್ಯೆಗಳ ತಿದ್ದುಪಡಿ ಮಸೂದೆಗೆ ವಿಧಾನಸಭೆಯು ಬುಧವಾರ ಅಂಗೀಕಾರ ನೀಡಿತು. ಈ ಏರಿಕೆಯಿಂದಾಗಿ ಸರ್ಕಾರ 17.34ಕೋಟಿ ರೂಪಾಯಿ ಆವರ್ತಕ ವೆಚ್ಚವನ್ನು ಭರಿಸಬೇಕಾಗಿದೆ.
ಸಭಾಪತಿ ಮತ್ತು ಸಭಾಧ್ಯಕ್ಷರ ವಾರ್ಷಿಕ ಆತಿಥ್ಯ ಭತ್ಯೆಯನ್ನು 50ಸಾವಿರ ರೂ.ದಿಂದ 75ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಭಾಪತಿ, ಸಭಾಧ್ಯಕ್ಷ, ಉಪಸಭಾಪತಿ, ವಿರೋಧ ಪಕ್ಷದ ಮುಖಂಡರು, ಸರ್ಕಾರದ ಮುಖ್ಯ ಸಚೇತಕರು ತಮ್ಮ ಅಧಿಕಾರದ ಅವಧಿ ಪೂರ್ತಿ ಮತ್ತು ಅದರ ಮುಕ್ತಾಯದ 60ದಿವಸಗಳವರೆಗೆ ಬೆಂಗಳೂರು ನಗರ ಅಥವಾ 30ಕಿ.ಮೀ.ಒಳಗೆ ಒಂದು ಸುಸಜ್ಜಿತ ಮನೆಗೆ ಬದಲಾಗಿ ಮಾಸಿಕ 10ಸಾವಿರ ರೂಪಾಯಿ ದರದಲ್ಲಿ ಮನೆ ಬಾಡಿಗೆ ಭತ್ಯೆಗೆ ಹಕ್ಕುದಾರರಾಗಿರುತ್ತದೆ.
ರಾಷ್ಟ್ರದ ಒಳಗೆ ಪ್ರವಾಸ ಮಾಡುವಾಗ ರೈಲಿನಲ್ಲಿ ಲಭ್ಯವಿರುವ ಉತ್ತಮ ದರ್ಜೆಯ ಒಂದು ಪ್ರಯಾಣ ದರದ ಎರಡರಷ್ಟನ್ನು ಇವರು ಪಡೆದುಕೊಳ್ಳಬಹುದು. ಅಥವಾ ಇವರು ತಮ್ಮ ಪ್ರಯಾಣಕ್ಕೆ ಒಂದು ಬೋಗಿಯನ್ನು ಮೀಸಲಿರಿಸಿಕೊಂಡಿದ್ದರೆ ಅಂಥ ಬೋಗಿಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.