ಚಿತ್ರರಂಗದ ಬಹುದಿನದ ಕನಸು ಕೊನೆಗೂ ಈಡೇರಿದೆ. ಆಡಿಯೋ ಮತ್ತು ವಿಡಿಯೋಗಳನ್ನು ನಕಲು ಮಾಡುವುದನ್ನು ತಡೆಗಟ್ಟಲು ಗೂಂಡಾ ಕಾಯ್ದೆ ಪ್ರಯೋಗಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದಿದೆ.
ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಈ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಲಾಯಿತು. ಈ ಮಸೂದೆಯನ್ನು ಮಂಡಿಸಿದ ಗೃಹ ಸಚಿವ ವಿ.ಎಸ್. ಆಚಾರ್ಯ, ಪೈರಸಿ ತಡೆಯುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮೂಲಕ ಚಿತ್ರೋದ್ಯಮಿಗಳು ಕೋರಿದ್ದರು. ಬೆಳಗಾವಿ ಅಧಿವೇಶನದಲ್ಲಿಯೇ ಈ ತಿದ್ದುಪಡಿ ಮಸೂದೆ ಮಂಡಿಸಲಾಗಿತ್ತು.
ಇದಕ್ಕೂ ಮೊದಲು ಮಾತನಾಡಿದ ಕಾಂಗ್ರೆಸ್‌ನ ಬಿ.ಸಿ. ಪಾಟೀಲ್, ಆಂಧ್ರ ಪ್ರದೇಶದಲ್ಲಿ ಪೈರಸಿ ತಡೆಗೆ ಪ್ರತ್ಯೇಕ ಕಾಯ್ದೆಯೇ ಇದೆ. ಅಲ್ಲದೆ, ಇಂತಹ ಪ್ರಕರಣಗಳ ವಿಲೇವಾರಿ ಪ್ರತ್ಯೇಕ ನ್ಯಾಯಾಲಯವೇ ಇದೆ. ರಾಜ್ಯದಲ್ಲೂ ಪ್ರತ್ಯೇಕ ನ್ಯಾಯಾಲಯ ರೂಪಿಸಬೇಕು ಎಂದು ಆಗ್ರಹಿಸಿದರು.
ಪೈರಸಿಯನ್ನು ಗೂಂಡಾ ಕಾಯ್ದೆ ವ್ಯಾಪ್ತಿಗೆ ತಂದಿರುವುದಕ್ಕೆ ಕನ್ನಡ ಚಿತ್ರರಂಗ ತೀವ್ರ ಹರ್ಷ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ, ಚಿತ್ರರಂಗದ ಕೂಗಿಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ. ಮರಣದ ಅವಸ್ಥೆಯಲ್ಲಿದ್ದ ಕನ್ನಡ ಚಿತ್ರೋದ್ಯಮವನ್ನು ಸರ್ಕಾರ ಉಳಿಸಿದೆ. ಈ ಮೂಲಕ ನಮ್ಮ ಬಹುದಿನದ ಬೇಡಿಕೆ ಈಡೇರಿದೆ ಎಂದಿದ್ದಾರೆ.