ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ 770ಕೋಟಿ ರೂ.ಒಡೆಯ!
25ರ ಹರೆಯದಲ್ಲೇ ಅಪಾರ ಪ್ರಮಾಣದ ಆಸ್ತಿಯ ಒಡೆಯ...
ಬೆಂಗಳೂರು, ಗುರುವಾರ, 30 ಜುಲೈ 2009( 11:55 IST )
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, 25ರ ಹರೆಯದ ಪ್ರಿಯಕೃಷ್ಣ 770 ಕೋಟಿ ರೂಪಾಯಿ ಮೊತ್ತದ ಸ್ಥಿರ ಹಾಗೂ ಚರ ಆಸ್ತಿಯ ಒಡೆಯ. ಜತೆಗೆ, 743ಕೋಟಿ ರೂಪಾಯಿ ಸಾಲದ ಹೊರೆಯೂ ಇದೆ.
ಬುಧವಾರ ನಾಮಪತ್ರ ಸಲ್ಲಿಸುವ ವೇಳೆ ಅವರು ತಮ್ಮ ಆಸ್ತಿ ವಿವರ ಕುರಿತ ಪ್ರಮಾಣ ಪತ್ರದಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. 2,60,49, 537 ರೂಪಾಯಿ ನಗದು ಹೊಂದಿರುವ ಪ್ರಿಯಕೃಷ್ಣ ಸುಮಾರು 20ವಿವಿಧ ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿಯ ಮೊತ್ತವೇ ಸುಮಾರು 50ಕೋಟಿ ರೂಪಾಯಿ ಪ್ರಿಯಕೃಷ್ಣ ಬಳಿ ಕೃಷಿ ಭೂಮಿಯಾಗಲೀ, ಅವರ ಹೆಸರಿನಲ್ಲಿ ಮನೆಯಾಗಲೀ ಇಲ್ಲ. ಆದರೆ, ನಗರದ ಆರ್‌ಪಿಸಿ ಲೇಔಟ್, ಕೆಂಗೇರಿ, ಮಾಗಡಿ ಕಾರ್ಡ್ ರಸ್ತೆ ವಿಸ್ತರಣೆ, ಹಾರೋಹಳ್ಳಿ , ನಾಗದೇವನಹಳ್ಳಿ ಸೇರಿದಂತೆ 9ಕಡೆ ನಿವೇಶನ ಹೊಂದಿದ್ದಾರೆ. ಇದರ ಮೊತ್ತ ಸುಮಾರು 27ಕೋಟಿ ರೂಪಾಯಿ.
17ಕೋಟಿ ರೂಪಾಯಿ ಮೊತ್ತದ ವಿವಿಧ ಕಂಪೆನಿಗಳ ಷೇರು, ಬಾಂಡ್‌ಗಳಿವೆ. ಸುಮಾರು 88ಕೋಟಿ ರೂಪಾಯಿಗಳನ್ನು ವಿವಿಧ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವುದು ಸೇರಿದಂತೆ ಒಟ್ಟಾರೆ ಅವರ ವ್ಯವಹಾರದ ಒಟ್ಟು ಮೊತ್ತ 680ಕೋಟಿ ರೂಪಾಯಿ. ವಿವಿಧ ಬ್ಯಾಂಕುಗಳು, ಸಂಸ್ಥೆಗಳಲ್ಲಿ ಮಾಡಿರುವ ಸಾಲ, ಪಡೆದಿರುವ ಮುಂಗಡದ ಪ್ರಮಾಣ 743ಕೋಟಿ ರೂಪಾಯಿ, ಇದರಲ್ಲಿ ಸಂಬಂಧಿಕರಿಂದ ಪಡೆದಿರುವ ಕೈ ಸಾಲ 51.54ಕೋಟಿ ರೂಪಾಯಿಗಳು.
ಅಷ್ಟೇ ಅಲ್ಲದೆ 74ಲಕ್ಷ ರೂಪಾಯಿ ಮೊತ್ತದ ಆಡಿ ಕಾರು ಸೇರಿದಂತೆ ಐದು ಕಾರುಗಳ ಒಡೆಯ ಪ್ರಿಯಕೃಷ್ಣ. ಅವರ ಕಾರುಗಳ ಮೌಲ್ಯವೇ 2ಕೋಟಿ ರೂಪಾಯಿ ದಾಟುತ್ತದೆ. 4.88ಲಕ್ಷ ರೂಪಾಯಿ ಮೊತ್ತದ ಬೊಲೆರೋ, 6.92ಲಕ್ಷ ರೂಪಾಯಿನ ಶವರ್ಲೆ, 26.03ಲಕ್ಷ ರೂಪಾಯಿನ ಮಾಂಟೆಗೋ ಹಾಗೂ 6.14ಲಕ್ಷದ ಕ್ವಾಲಿಸ್‌ಗಳನ್ನು ಹೊಂದಿದ್ದಾರೆ. ಭೂಮಿ ಅಗೆಯುವುದು, ರಸ್ತೆ ಮಟ್ಟ ಮಾಡುವಂತಹ ವಾಹನಗಳನ್ನೂ ಅವರು ಹೊಂದಿದ್ದು, ಅವುಗಳ ಮೌಲ್ಯ ಸುಮಾರು 2ಕೋಟಿ ರೂ.ಮೀರುತ್ತದೆ. 12.61ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನೂ ಹೊಂದಿದ್ದಾರೆ.
ಪ್ರಿಯಕೃಷ್ಣ ಅವರ ತಂದೆ ಎಂ.ಕೃಷ್ಣಪ್ಪ ಅವರು ಬೆಂಗಳೂರು ವಿಜಯನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ. ಪ್ರಿಯಕೃಷ್ಣ ಅವರು ಎಂ.ಎ ಹಾಗೂ ಎಲ್‌ಎಲ್‌ಬಿ ಪದವಿ ಹೊಂದಿದ್ದಾರೆ.