ಗೃಹ ಮಂಡಳಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಮಧ್ಯಂತರ ವರದಿಯನ್ನು ತಮಗೆ ಸಲ್ಲಿಸಿದ್ದಾರೆ ಎಂದು ರಾಜ್ಯಪಾಲ ಹಂಸರಾಜ್ ಭರದ್ವಾಜ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಹಗರಣವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ವರದಿಯಲ್ಲಿ ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಗರಣದ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ತಮಗೆ ಮನವಿ ನೀಡಿದ ಕೂಡಲೇ ಅದನ್ನು ಮುಖ್ಯಮಂತ್ರಿ ತಮ್ಮ ವರದಿಯಲ್ಲಿ ತನಿಖೆ ನಡೆಸುವ ಕುರಿತು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಈ ಕುರಿತು ಪ್ರತಿಪಕ್ಷ ನಾಯಕರಾದ ಸಿದ್ಧರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗದ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಜೊತೆಯಾಗಿ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಆದರೆ ಏಕಾಏಕಿ ತಾವು ತನಿಖೆ ನಡೆಸಲು ಆದೇಶಿಸಲಾಗದು. ಹಾಗಾಗಿ ಸರ್ಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿಯಿಂದ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಕಾಪಾಡಲಾಗುತ್ತಿದೆ. ಮೈಸೂರು ಸೇರಿದಂತೆ ಅಲ್ಲಲ್ಲಿ ನಡೆದ ಕೆಲ ಘಟನೆಗಳನ್ನು ಹೊರತುಪಡಿಸಿದರೆ ಉಳಿದಂತೆ ಶಾಂತಿಯುತವಾಗಿದೆ ಎಂದು ಹೇಳಿದರು.