ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು ಗರಿಷ್ಠ 200ಕ್ಕೆ ಹೆಚ್ಚಿಸುವ ಹಾಗೂ ಶೇ.10 ರಷ್ಟು ನಾಮನಿರ್ದೇಶನ ಸದಸ್ಯರನ್ನು ನೇಮಕ ಮಾಡುವ ಕರ್ನಾಟಕ ಪೌರನಿಯಮಗಳ ತಿದ್ದುಪಡಿ ಮಸೂದೆ 2009ಕ್ಕೆ ವಿಧಾನಮಂಡಲದ ಉಭಯ ಸದನಗಳು ಅಂಗೀಕಾರ ನೀಡಿದವು.
ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್, ಆಡಳಿತವನ್ನು ಸುಗಮವಾಗಿ ನಡೆಸುವ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶದಲ್ಲಿ ಸರಾಸರಿ 30 ಸಾವಿರ ಜನಸಂಖ್ಯೆಯುಳ್ಳ ಪುಟ್ಟ ಪುಟ್ಟ ಸಂಘಟಿತ ವಾರ್ಡ್ ರಚಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಆರೋಪ ಮಾಡಿದ ಪ್ರತಿಪಕ್ಷಗಳು, ಈ ಹಿಂದೆ ಕೇವಲ 10 ಜನ ನಾಮ ನಿರ್ದೇಶನ ಮಾಡಲು ಅವಕಾಶ ಇತ್ತು. ಆದರೆ ಈಗ 20 ಮಂದಿಯನ್ನು ನಾಮ ನಿರ್ದೇಶನ ಮಾಡುವ ಮೂಲಕ ರಾಜ್ಯ ಸರ್ಕಾರ ಹೆಚ್ಚು ಬಿಜೆಪಿ ಕಾರ್ಯಕರ್ತರಿಗೆ ಪುನರ್ವಸತಿ ಕಲ್ಪಿಸಲೆಂದೇ ತಿದ್ದುಪಡಿ ತರುತ್ತಿದೆ ಎಂದು ಆರೋಪಿಸಿತು.
ಪ್ರತಿಪಕ್ಷ ನಾಯಕರಾದ ಎಚ್.ಡಿ. ರೇವಣ್ಣ ಮತ್ತು ಟಿ.ಬಿ. ಜಯಚಂದ್ರ, ಚುನಾವಣೆಯಲ್ಲಿ ಸೋಲುವ ಭಯದಿಂದ ಹೀಗೆ ಮಾಡುತ್ತಿದ್ದೀರೋ ಹೇಗೆ? ಎಂದು ಲೇವಡಿ ಮಾಡಿದರು.
ಇದೇ ವೇಳೆ ಬಿಬಿಎಂಪಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಪತ್ರಗಳ ಬದಲಿಗೆ ಮತಯಂತ್ರಗಳನ್ನು ಬಳಕೆ ಮಾಡುವುದಕ್ಕೂ ಸದನದಲ್ಲಿ ಅನುಮೋದನೆ ನೀಡಲಾಯಿತು.