ರಾಜಧಾನಿಯ ಕೇಂದ್ರ ಭಾಗದಲ್ಲಿರುವ ರೇಸ್ ಕೋರ್ಸ್ ಸ್ಥಳಾಂತರವಾದ ನಂತರ ಆ ಜಾಗವನ್ನು ಹಾಗೆಯೇ ಉಳಿಸಿಕೊಂಡು ಹಸಿರು ವಲಯವಾಗಿ ಕಾಪಾಡಿಕೊಳ್ಳಬೇಕೆಂದು ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಸೇರಿದಂತೆ ಕೆಲವು ಸಾಹಿತಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್, ಡಾ| ಯು.ಆರ್. ಅನಂತಮೂರ್ತಿ ಸೇರಿದಂತೆ ಏಳು ಮಂದಿ ಸಾಹಿತಿಗಳು ಮತ್ತು ಕಲಾವಿದರು ಈ ಅರ್ಜಿಯನ್ನು ಸಲ್ಲಿಸಿದ್ದು, 2009ರ ಡಿ. 31ರಿಂದ ರೇಸ್‌ಕೋರ್ಸ್‌ನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಜಾಗದಲ್ಲಿ ವಿಶ್ವದಲ್ಲೇ ಅತಿ ಎತ್ತರದ ಕಟ್ಟಡ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಅವಕಾಶ ನೀಡದೆ ಇದನ್ನು ಹಸಿರು ವಲಯವಾಗಿ ಉಳಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
70 ಎಕರೆಗೂ ಹೆಚ್ಚು ಪ್ರದೇಶವನ್ನು ವ್ಯಾಪಿಸಿರುವ ರೇಸ್‌ಕೋರ್ಸ್‌ನಲ್ಲಿ 200 ರಿಂದ 250 ಅಂತಸ್ತಿನ ಬೃಹತ್ ಕಟ್ಟಡ ನಿರ್ಮಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ಆದರೆ ಪ್ರಸ್ತುತ ಬೆಂಗಳೂರಿನಲ್ಲಿ ಶಬ್ದ ಮತ್ತು ವಾಯುಮಾಲಿನ್ಯ ಅಪಾಯಕಾರಿ ಹಂತ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದ ಕೇಂದ್ರ ಭಾಗವಾಗಿರುವ ರೇಸ್‌ಕೋರ್ಸ್‌ನ್ನು ಹಸಿರು ವಲಯವಾಗಿ ಸ್ಥಾಪಿಸುವುದು ಸೂಕ್ತ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.