ವಿದ್ಯುತ್ ಉತ್ಪಾದನೆ ಪ್ರಮಾಣದಲ್ಲಿ ಇಳಿಕೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿದ್ಯುತ್ ಕಡಿತ ಮಾಡುವ ನಿರ್ಧಾರಕ್ಕೆ ಸರ್ಕಾರ ಮುಂದಾಗಿರುವುದಾಗಿ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದಿಂದ 1350 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಆಗಬೇಕಾಗಿದೆ. ಆದರೆ ಕೇವಲ 800ಮೆಗಾವ್ಯಾಟ್ ವಿದ್ಯುತ್ ಅನ್ನು ಕೇಂದ್ರ ನೀಡುತ್ತಿರುವುದರಿಂದ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ ಎಂದು ವಿವರಿಸಿದರು.
ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 14ಗಂಟೆಗಳ ಕಾಲ ಹಾಗೂ ನಗರ ಪ್ರದೇಶದಲ್ಲಿ ಎರಡು ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡಲು ನಿರ್ಧರಿಸಲಾಗಿದೆ. ಆದರೆ ಬೆಂಗಳೂರು ನಗರದಲ್ಲಿ ದಿನದ 24ಗಂಟೆಯೂ ವಿದ್ಯುತ್ ಪೂರೈಕೆಗೆ ಯತ್ನಿಸಲಾಗುವುದು. ಅನಿವಾರ್ಯವಾದರೆ 2ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯದಲ್ಲಿ ಜಲಾಶಯಗಳು ತುಂಬಿ ಹರಿಯುತ್ತಿದ್ದು, ಇನ್ನು ಮುಂದೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಇತ್ತೀಚೆಗಷ್ಟೇ ಈಶ್ವರಪ್ಪ ಅವರು ಹೇಳಿಕೆ ನೀಡಿದ್ದರು. ಇದೀಗ ಕೇಂದ್ರ ಸರ್ಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಆಗದಿರುವ ಹಿನ್ನೆಲೆಯಲ್ಲಿ ಎರಡು ತಿಂಗಳವರೆಗೆ ವಿದ್ಯುತ್ ಕಡಿತ ಮಾಡುವ ನಿರ್ಧಾರದಿಂದ ರೈತರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಂತಾಗಿದೆ.