ತಮಿಳುನಾಡು ಸರ್ಕಾರ ಕುಡಿಯುವ ನೀರು ಪೂರೈಕೆಗಾಗಿ ಹೊಗೇನಕಲ್‌ನಲ್ಲಿ ಆರಂಭಿಸಲು ಉದ್ದೇಶಿಸಿರುವ ಯೋಜನೆ ಬಗ್ಗೆ ಗಡಿ ಉಲ್ಲಂಘನೆ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿ ವಿಷಯ ಪ್ರಸ್ತಾಪಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದನದಲ್ಲಿ ಸದಸ್ಯ ಎನ್.ಮಂಜುನಾಥ್ ಅವರ ಪರವಾಗಿ ಆನಂದ್ ಅವರ ತಡೆಹಿಡಿಯಲಾದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಈ ಯೋಜನೆಗೆ ನ್ಯಾಯಮಂಡಳಿ ಅನುಮತಿ ನೀಡಿಲ್ಲ. ಹಾಗಾಗಿ ನ್ಯಾಯಮಂಡಳಿಯ ಮುಂದೆಯೂ ತಕರಾರು ಸಲ್ಲಿಸಲು ಕಾನೂನು ತಜ್ಞರ ಜೊತೆ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಹೊಗೇನಕಲ್ ಯೋಜನೆಯನ್ನು ಅಂತಾರಾಜ್ಯ ಗಡಿ ಪ್ರದೇಶದಲ್ಲಿ ಆರಂಭಿಸಲಾಗುತ್ತಿದೆ. ಈ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಸುಪ್ರೀಂಕೋರ್ಟ್‌ನಲ್ಲಿ ಚರ್ಚೆ ನಡೆಸಲು ಸರ್ಕಾರ ಸರ್ವ ಸಿದ್ಧತೆ ನಡೆಸಿದೆ ಎಂದು ಹೇಳಿದರು. ಈ ಯೋಜನೆಗೆ ಒಳಪಡುವ ಪ್ರದೇಶದಲ್ಲಿ ಜಂಟಿ ಸರ್ವೆ ನಡೆಸಬೇಕೆಂಬ ಬೇಡಿಕೆಯಿದೆ. ಆದರೂ ಸರ್ವೆ ಕಾರ್ಯ ಇಲ್ಲಿಯವರೆಗೆ ನಡೆದಿಲ್ಲ, ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿಗಳು ಸಮೀಕ್ಷೆ ನಡೆಸುವಂತೆ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ವಿವರಿಸಿದರು.
ಹೊಗೇನಕಲ್ ಯೋಜನೆಯ ವಿವಾದದ ಹಿನ್ನೆಲೆಯಲ್ಲಿ ಆರ್ಥಿಕ ನೆರವು ನೀಡದಂತೆ ಜಪಾನ್ ಸಾಗರೋತ್ತರ ಹಣಕಾಸು ಸಂಸ್ಥೆಗೂ ಪತ್ರ ಬರೆಯಲಾಗಿದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.
ಹೊಗೇನಕಲ್ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡು ಅಂತಾರಾಜ್ಯ ಗಡಿ ಪ್ರದೇಶದಲ್ಲಿ ಬರುತ್ತದೆ. ಗಡಿ ಜಂಟಿ ಸರ್ವೆ ಕಾರ್ಯ ನಡೆಸಲು ಎರಡೂ ರಾಜ್ಯಗಳ ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು. ಈ ಬಗ್ಗೆ ಜಂಟಿ ಸಭೆಗಳು ನಡೆದರೂ ಸಹ ಪರಿಶೀಲನಾ ಕಾರ್ಯ ತಮಿಳುನಾಡು ರಾಜ್ಯದ ಅಧಿಕಾರಿಗಳ ಅಸಹಕಾರದಿಂದ ಆರಂಭವಾಗಿಲ್ಲ ಎಂದು ತಿಳಿಸಿದರು.