ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿಸ್ವಾಮಿಗಳ ಕುರಿತು ಅವಹೇಳನಕಾರಿಯಾಗಿ ವರದಿ ಪ್ರಕಟಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ವಿರುದ್ಧ ಉಡುಪಿ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಸ್ಥಳೀಯ ನಿವಾಸಿ ವಾಸುದೇವ್ ಭಟ್ ಎಂಬುವರು ಖಾಸಗಿ ಮೊಕದ್ದಮೆ ದಾಖಲಿಸಿದ್ದಾರೆ.
ಖ್ಯಾತ ನಟಿ ಮಲ್ಲಿಕಾ ಶೆರಾವತ್ ಇತ್ತೀಚೆಗೆ ಇತಿಹಾಸ ಪ್ರಸಿದ್ಧ ಗೋಕರ್ಣ ದೇವಾಲಯಕ್ಕೆ ಭೇಟಿ ನೀಡಿದ್ದು, ಇದಕ್ಕೆ ಸಂಬಂಧಿಸಿ ಮೇ 27, 2009ರ ಲಂಕೇಶ್ ವಾರಪತ್ರಿಕೆಯಲ್ಲಿ ಅವಹೇಳನಕಾರಿ, ಆಧಾರರಹಿತ ಮತ್ತು ತುಚ್ಚ ವರದಿ ಪ್ರಕಟವಾಗಿತ್ತು ಎಂದು ದೂರಲಾಗಿದೆ.
ಈ ವರದಿಯಿಂದಾಗಿ ಮಠ ಮತ್ತು ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಭಕ್ತರ ಭಾವನೆಗೆ ಘಾಸಿಯುಂಟು ಮಾಡಿದೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮತ್ತು ಕೋಮು ಸಾಮರಸ್ಯ ಕದಡುವ ಯತ್ನ ಪತ್ರಿಕೆಯಿಂದಾಗಿದ್ದು, ಐಪಿಸಿ 153ಎ, 295ಎ ಮತ್ತು 505 ಅಡಿ ಶಿಕ್ಷಾರ್ಹ ಅಪರಾಧವೆಸಗಿದ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ವಾಸುದೇವ್ ಭಟ್ ಮನವಿ ಮಾಡಿದ್ದಾರೆ.
ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಮತ್ತು ವರದಿಗಾರ ಬಿಳಿದಾಳೆ ಈಶ ವಿರುದ್ದ ದೂರು ಸಲ್ಲಿಸಿದ್ದು, ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನಗರದ ಮಣಿಪಾಲ ಠಾಣಾಧಿಕಾರಿಗೆ ನ್ಯಾಯಾಲಯವು ಕಡತ ಹಸ್ತಾಂತರಿಸಿ ಆಗಸ್ಟ್ 18ಕ್ಕೆ ವಿಚಾರಣೆಯನ್ನು ಮುಂದೂಡಿದೆ.