ಗ್ರಾನೈಟ್ ಮಾಲೀಕರಿಗೆ ಜೀವ ಬೆದರಿಕೆ ಹಾಕುತ್ತಿದ್ದ ರವಿ ಪೂಜಾರಿಯ ಇಬ್ಬರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದಿರಾನಗರದ ವಸಂತಕುಮಾರ್ (30) ಹೆಬ್ಬಾಳದ ಪ್ರಸಾದ್ ಶೆಟ್ಟಿ ಬಂಧಿತ ಆರೋಪಿಗಳು. ಕತ್ರಿಗುಪ್ಪೆಯ ಗ್ರಾನೈಟ್ ವೆಂಕಟೇಶ್ ಅವರಿಗೆ ಹಣವನ್ನು ಕೊಡುವಂತೆ ಜೀವ ಬೆದರಿಕೆ ಹಾಕಿದ್ದರು.
ಅಲ್ಲದೆ ಇವರು ಬೆಂಗಳೂರಿನ ಬಿಲ್ಡರುಗಳು ಫೋನ್ ನಂಬರ್‌ಗಳನ್ನು ವಿದೇಶದಲ್ಲಿರುವ ರವಿಪೂಜಾರಿಗೆ ನೀಡುತ್ತಿದ್ದರು. ರವಿ ಪೂಜಾರಿಯ ನಿರ್ದೇಶನದಂತೆ ಬೆಂಗಳೂರಿನ ಪ್ರಮುಖ ಉದ್ಯಮಿಗಳಿಗೆ ಹಾಗೂ ಬಿಲ್ಡರ್‌ಗಳ ಕಚೇರಿಗೆ ವ್ಯವಹಾರದ ನೆಪದಲ್ಲಿ ಹೋಗಿ ಮಾಲೀಕರ ಸ್ಥಿರ ದೂರವಾಣಿ ಮತ್ತು ಮೊಬೈಲ್ ಫೋನ್ ನಂಬರ್‌ಗಳನ್ನು ಪಡೆದು ಅವುಗಳನ್ನು ಭೂಗತ ಪಾತಕಿ ರವಿ ಪೂಜಾರಿಗೆ ನೀಡಿ ಆತನಿಂದ ಬೆದರಿಕೆ ಕರೆ ಮಾಡಿಸಿ ಬೃಹತ್ ಮೊತ್ತದ ಹಣಕ್ಕೆ ಒತ್ತಾಯಿಸಿದ್ದರು ಎಂಬುದನ್ನು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.
ಖಚಿತ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬೆಂಗಳೂರು ನಗರದ ಸಿಸಿಬಿ ಮತ್ತು ಪೂರ್ವ ವಿಭಾಗದ ಇಂದಿರಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.