ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಮೊಬೈಲ್‌ಗೆ ಮೈಸೂರಿನ ಯುವಕನೊಬ್ಬ ಅಸಭ್ಯ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮೈಸೂರಿಗೆ ಆಗಮಿಸಿದ್ದು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಸೈಬರ್ ಕೇಂದ್ರದ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯನಗರದ ಯುವಕ ಇತ್ತೀಚೆಗೆ ಅಸಭ್ಯ ಸಂದೇಶವೊಂದನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಿದ್ದ ಎನ್ನಲಾಗಿದೆ. ಇದರ ಕುರಿತು ತನಿಖೆ ನಡೆಸಿದ ದೆಹಲಿ ಪೊಲೀಸರಿಗೆ ಇ-ಮೇಲ್‌ನ ಮೂಲ ಸಿಕ್ಕಿದ್ದು ಕರ್ನಾಟಕದಿಂದ. ಆ ನಿಟ್ಟಿನಲ್ಲಿ ದೆಹಲಿಯಿಂದ ನಾಲ್ಕು ಜನರ ಪೊಲೀಸ್ ತಂಡವೊಂದು ವಿದ್ಯಾರ್ಥಿ ಶೋಧದಲ್ಲಿ ತೊಡಗಿದೆ.
ಸಂದೇಶ ಕಳುಹಿಸಿದ ಯುವಕ ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ರಾಷ್ಟ್ರಪತಿಗಳಿಗೆ ಅಸಭ್ಯ ಸಂದೇಶ ಕಳುಹಿಸಿದ ಆರೋಪ ಎದುರಿಸುತ್ತಿದ್ದು, ಪೊಲೀಸರು ಐಪಿ ವಿಳಾಸ ಮತ್ತು ಇ-ಮೇಲ್ ಐಡಿಯನ್ನು ಸೈಬರ್ ಕೆಫೆಯಲ್ಲಿ ಪತ್ತೆಹಚ್ಚಿದ್ದಾರೆ.
ಸಂದೇಶ ಕಳುಹಿಸಿದ ವಿದ್ಯಾರ್ಥಿ ಅವಿನಾಶ್ ಕಷ್ಯಪ್ ಎಂದು ಗುರುತಿಸಲಾಗಿದೆ. ಸೈಬರ್ ಸೆಂಟರ್ ಮೂಲಕ ಸಂದೇಶ ಬಂದಿರುವುದನ್ನು ಖಚಿತಪಡಿಸಿಕೊಂಡ ದೆಹಲಿ ಪೊಲೀಸರು ಬುಧವಾರ ಸಂಜೆಯೇ ನಗರಕ್ಕೆ ಆಗಮಿಸಿ ಸಂದೇಶ ಕಳುಹಿಸಿದ್ದ ಎನ್ನಲಾದ ವಿದ್ಯಾರ್ಥಿ ಅವಿನಾಶ್ ಕಶ್ಯಪ್ ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದರು.
ಆತನ ಪೋಷಕರು ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದಾರೆ. ಕಶ್ಯಪ್ ನಗರದ ಪ್ರತಿಷ್ಠಿತ ಸ್ಟೇಟ್ ಕ್ಯಾಪಿಟಲ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಯುವಕನ ತಂದೆ ಜೀವವಿಮಾ ನಿಗಮದ(ಎಲ್‌ಐಸಿ)ಯ ನಿವೃತ್ತ ಡಿವಿಶನಲ್ ಮ್ಯಾನೇಜರ್. ಅವರನ್ನು ವಿಜಯನಗರ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ ತನ್ನ ಮಗ ಕಷ್ಯಪ್ ಅಮಾಯಕನಾಗಿದ್ದು, ಆತನ ಇ-ಮೇಲ್ ಐಡಿಯನ್ನು ಯಾರೋ ಸಮಾಜಘಾತುಕರು ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಿದ್ದಾರೆ.
ಏತನ್ಮಧ್ಯೆ, ದೆಹಲಿ ಪೊಲೀಸರು ನಗರಕ್ಕೆ ಆಗಮಿಸಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ನಗರದ ಪೊಲೀಸ್ ಕಮೀಷನರ್ ಸುನಿಲ್ ಅಗರ್‌ವಾಲ್ ತಿಳಿಸಿದ್ದಾರೆ.