ತಾಲೂಕಿನ ಹಣಕೋಣದಲ್ಲಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಗ್ರಾಮಸ್ಥರು ನಡೆಸುತ್ತಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು, ಬಸ್‌ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಹೋರಾಟ ಹಿಂಸಾರೂಪಕ್ಕ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪ್ರತಿಭಟನೆಯ ಉಗ್ರ ರೂಪಕ್ಕೆ 3 ಬಸ್, ನಾಲ್ಕೈದು ಬೈಕ್‌ಗಳು ಬೆಂಕಿಗೆ ಆಹುತಿಯಾಗಿದೆ. ಗ್ರಾಮಸ್ಥರ ಕಲ್ಲೇಟಿಗೆ ಡಿವೈಎಸ್ಪಿ, ಎಎಸ್ಐ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಸುಮಾರು 40ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ಹಣಕೋಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಘಟನೆ ಹಿನ್ನೆಲೆ: ಕಾರವಾರದಿಂದ 18ಕಿ.ಮೀ. ದೂರದ ಹಣಕೋಣದಲ್ಲಿ ಉಷ್ಣ ಸ್ಥಾವರ ನಿರ್ಮಿಸಲು ಉದ್ದೇಶಿಸಿರುವ ಇಂದ್ ಭಾರತ್ ಕಂಪೆನಿ ಗ್ರಾಮ ಪಂಚಾಯಿತಿ ಪರವಾನಿಗೆ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಸ್ಥಾವರ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿತ್ತು.
ಈ ಬಗ್ಗೆ ಕಂಪೆನಿಗೆ ನೋಟಿಸ್ ಕಳುಹಿಸಿದರೂ ಸ್ಪಂದಿಸದ ಕಾರಣ ತಾವೇ ಅದನ್ನು ನೆಲಸಮಗೊಳಿಸುವುದಾಗಿ ತಿಳಿಸಿ ರಕ್ಷಣೆ ನೀಡುವಂತೆ ಪೊಲೀಸರನ್ನು ಕೋರಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕರ ಮಾಹಿತಿ ನೀಡಬೇಕಾದ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ದಾಖಲಾದರು. ಎಷ್ಟು ವಿನಂತಿಸಿದರೂ ಬರಲು ಒಪ್ಪದ ಕಾರಣ ಕೆರಳಿದ ಪ್ರತಿಭಟನಕಾರರು, ರಸ್ತೆ ತಡೆ ನಡೆಸಲು ತೀರ್ಮಾನಿಸಿದರು.
ಸುಮಾರು 400 ಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಕಾರಣ ಪ್ರತಿಭಟನಾಕಾರರು ತಾವೇ ಸ್ಥಾವರ ಪ್ರದೇಶಕ್ಕೆ ನುಗ್ಗಲು ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ಉಂಟಾಯಿತು.