ಪ್ರಯಾಣಿಕರ ರೈಲುಗಾಡಿಗಳ ಕೊರತೆಯ ಸ್ಥಿತಿ ಸರಿತೂಗಿದ ಕೂಡಲೇ ಬೆಂಗಳೂರು-ಮಂಗಳೂರು ನಡುವೆ ಹಗಲು ರೈಲು ಸಂಚಾರ ಆರಂಭಿಸುವುದಾಗಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.
ರಾಜ್ಯದ ಸಂಸದಾರ ಅನಂತಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್, ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ವಿ.ಧನಂಜಯ್ ಕುಮಾರ್ ಹಾಗೂ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀನಿವಾಸ್ ಕಾಮತ್ ಅವರನ್ನು ಒಳಗೊಂಡಿದ್ದ ನಿಯೋಗವೊಂದು ಗುರುವಾರ ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿತ್ತು.
ಬೆಂಗಳೂರು-ಮಂಗಳೂರು ನಡುವಣ ರಾತ್ರಿ ರೈಲಿನ ಸಂಚಾರವನ್ನು ಕೇರಳದ ಕಣ್ಣೂರಿನ ತನಕ ವಿಸ್ತರಣೆ ಮಾಡಿರುವ ಕ್ರಮವನ್ನು ವಾಪಸು ಪಡೆಯುವ ಮತ್ತು ಮುಂಬೈ-ಕಾರವಾರದ ನಡುವಣ ಹೊಸ ರೈಲನ್ನು ಮಂಗಳೂರು ತನಕ ವಿಸ್ತರಿಸುವ ಕುರಿತು ರೈಲ್ವೆ ಮಂಡಳಿಯ ಅಧ್ಯಕ್ಷರ ಜತೆ ಸಮಾಲೋಚಿಸುವ ಆಶ್ವಾಸನೆಯನ್ನೂ ಬ್ಯಾನರ್ಜಿ ನೀಡಿದ್ದಾರೆ.
ಆ ಎರಡೂ ವಿಸ್ತರಣೆಗಳಿಗೆ ಸಂಬಂಧಿಸಿದ ಭೌಗೋಳಿಕ ಪರಿಚಯವನ್ನು ಸಚಿವರಿಗೆ ಮಾಡಿಕೊಟ್ಟ ನಂತರ ಸಮಸ್ಯೆಯ ಅರಿವಾಗಿದೆ ಎಂಬ ಪ್ರತಿಕ್ರಿಯೆ ಅವರಿಂದ ಬಂದದ್ದಾಗಿ ನಿಯೋಗದ ಸದಸ್ಯರು ಮಾತುಕತೆ ನಂತರ ತಿಳಿಸಿದ್ದಾರೆ.