ಕೆಎಂಎಫ್ ಹಾಲು ದರ ಇಳಿಕೆಗೆ ಒಕ್ಕೂಟದ ನೂತನ ಅಧ್ಯಕ್ಷ ಜಿ. ಸೋಮಶೇಖರ್ ರೆಡ್ಡಿ ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಹಾಲು ಮಾರಾಟ ಮತ್ತು ಉತ್ಪಾದಕರನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು, ಹಾಲಿನ ದರ ಇಳಿಕೆ ಬಗ್ಗೆ ಮುಖ್ಯಮಂತ್ರಿಗಳು ಕೂಡ ಸಲಹೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕರ್ನಾಟಕ ಹಾಲು ಒಕ್ಕೂಟವನ್ನು ರಾಷ್ಟ್ರದಲ್ಲೇ ನಂ. 1 ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು, ಗುಜರಾತ್ ರಾಜ್ಯಕ್ಕೆ ಹೋಲಿಸಿದರೆ, ಹಾಲು ಮಾರಾಟದಲ್ಲಿ ಕೇವಲ 60 ಲಕ್ಷ ಲೀಟರ್‌ಗಳ ಅಂತರವಿದೆ. ಮುಂದಿನ ದಿನಗಳಲ್ಲಿ ಕೆಎಂಎಫ್ ಅಭಿವೃದ್ಧಿಪಡಿಸಿ ಮಾರಾಟದಲ್ಲೂ ನಂ.1 ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಇದೇ ವೇಳೆ ಕೆಎಂಎಫ್‌ನ ಮಾಜಿ ಅಧ್ಯಕ್ಷ ಎಚ್.ಡಿ. ರೇವಣ್ಣ ವಿರುದ್ದ ಹರಿಹಾಯ್ದ ಅವರು, ಹಾಲು ಒಕ್ಕೂಟಕ್ಕೆ ರೇವಣ್ಣ ಅಧ್ಯಕ್ಷರಾಗಿದ್ದಾಗ ಹೊಲಸು ತುಂಬಿಕೊಂಡಿತ್ತು. ಆ ಹೊಲಸನ್ನು ಸ್ವಚ್ಛಗೊಳಿಸಿ, ಕೆಎಂಎಫ್ ಅಭಿವೃದ್ಧಿಪಡಿಸುವುದಾಗಿ ವಿವರಿಸಿದರು.