ರಾಜ್ಯದ ಐದು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೂ ಮುನ್ನ ಬಂಡಾಯದ ಬಿಸಿಯಿಂದಾಗಿ ಆಡಳಿತಾರೂಢ ಬಿಜೆಪಿ ಆರಂಭಿಕವಾಗಿ ವಿಘ್ನವನ್ನು ಎದುರಿಸುವಂತಾಗಿದೆ.
ಐದೂ ಕ್ಷೇತ್ರಗಳಿಗೆ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ಇದೀಗ ಗುಲ್ಬಾರ್ಗಾ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಚಿತ್ತಾಪುರ್ ಕ್ಷೇತ್ರಕ್ಕೆ ವಾಲ್ಮೀಕಿ ನಾಯಕ್ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದರು. ಆದರೆ ವಾಲ್ಮೀಕಿ ನಾಯಕ್ ವಿರುದ್ಧವೇ ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಸತೀಶ್ ಅಳ್ಳೊಳ್ಳಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಆಗಸ್ಟ್ 18ರಂದು ನಡೆಯಲಿರುವ ಉಪಚುನಾವಣೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಐದು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ಪ್ರಸಾದ್ ನಾಮಪತ್ರ ತಿರಸ್ಕೃತಗೊಳ್ಳುವ ಮೂಲಕ ಪ್ರಥಮ ಸೋಲನ್ನು ಕಂಡಂತಾಗಿತ್ತು.
ಚಿತ್ತಾಪುರ ಕ್ಷೇತ್ರದಿಂದ ಜಿ.ರಾಮಕೃಷ್ಣ ಅವರಿಗೆ ಟಿಕೆಟ್ ನೀಡುವುದಾಗಿ ಈ ಮೊದಲು ಬಿಜೆಪಿ ಭರವಸೆ ನೀಡಿತ್ತು. ಕೊನೆಗಳಿಗೆಯಲ್ಲಿ ವಾಲ್ಮೀಕಿ ನಾಯಕ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಆ ಸಂದರ್ಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಕಚೇರಿಯನ್ನು ಕೂಡ ಧ್ವಂಸಗೊಳಿಸಲಾಗಿತ್ತು.
ವಾಲ್ಮೀಕಿ ನಾಯಕ್ ಅವರಿಗೆ ಟಿಕೆಟ್ ನೀಡಿರುವುದರಿಂದ ಚಿತ್ತಾಪುರ ಕ್ಷೇತ್ರದ ಮಾದಿಗ ಜನಾಂಗ ಅಸಮಾಧಾನಗೊಂಡಿದೆ. ಆ ನಿಟ್ಟಿನಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಸತೀಶ ನಾಮಪತ್ರ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ತಾಪುರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆಯನ್ನು ಅಖಾಡಕ್ಕೆ ಇಳಿಸಲಾಗಿದೆ. ಚಿತ್ತಾಪುರ ಕ್ಷೇತ್ರವನ್ನು ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿರುವ ಬಿಜೆಪಿಗೆ ಈ ಬಂಡಾಯದ ಬಿಸಿ ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.