ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿದ್ದರೂ ವಿದ್ಯುತ್ ಲೋಡ್ ಶೆಡ್ಡಿಂಗ್‌ಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಟೀಕಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ವಿದ್ಯುತ್ ಇಲಾಖೆಯ ಅಸಮರ್ಪಕ ನಿರ್ವಹಣೆ ಅದಕ್ಷತೆಯಿಂದ ಲೋಡ್‌ಶೆಡ್ಡಿಂಗ್ ಜಾರಿ ಮಾಡಲಾಗುತ್ತಿದೆ ಇದು ನಾಚಿಕೆಗೇಡು ಎಂದವರು ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು. ಮುಖ್ಯಮಂತ್ರಿಗಳು ಜಲಾಶಯಗಳು ತುಂಬಿವೆ. ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಶಿಕಾರಿಪುರದಲ್ಲಿ ಹೇಳಿದ ದಿನವೇ ಬೆಂಗಳೂರಿನಲ್ಲಿ ವಿದ್ಯುತ್ ಸಚಿವರು ಲೋಡ್ ಶೆಡ್ಡಿಂಗ್ ಜಾರಿ ಬಗ್ಗೆ ಹೇಳಿಕೆ ನೀಡುತ್ತಾರೆ. ಇದೇನು ಸರ್ಕಾರ ನಡೆಸುವ ಪರಿಯೇ ಎಂದು ಕಟುವಾಗಿ ಪ್ರಶ್ನಿಸಿದರು.
ವಿದ್ಯುತ್ ಪರಿಸ್ಥಿತಿಯನ್ನು ಸರಿಪಡಿಸಲು ಇವರ ಕೈಯಲ್ಲಿ ಆಗದಿದ್ದರೆ ಅಧಿಕಾರ ಬಿಟ್ಟು ಹೋಗಲಿ ಮುಂದೆ ಬರುವವರು ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ ಎಂದು ಹೇಳಿದ ಅವರು ಎಲ್ಲದಕ್ಕೂ ಈ ಹಿಂದೆ ಪಾಪ ಮಾಡಿದ್ದರ ಫಲ ಈಗಿನ ವಿದ್ಯುತ್ ಸಮಸ್ಯೆ ಎನ್ನುತ್ತಾರೆ. ಹಾಗಾದರೆ ಇವರು ಮಾಡಿದ್ದೇನು ಎಂದರು.
ಬಿಜೆಪಿ ಎಷ್ಟು ಮೆಗಾವ್ಯಾಟ್ ವಿದ್ಯುತ್‌ನ್ನು ವಿದ್ಯುತ್ ಜಾಲಕ್ಕೆ ಹೆಚ್ಚುವರಿಯಾಗಿ ಮಾಡಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ. ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂರುವುದು ಸರಿಯಲ್ಲ ಎಂದು ಹೇಳಿದರು.