ಬಿಹಾರದಲ್ಲಿ ಚಿನ್ನದ ಸರ ಕದ್ದವನೊಬ್ಬನಿಗೆ ಸಾರ್ವಜನಿಕರು ಅಮಾನೀಯವಾಗಿ ಹೊಡೆದ ಘಟನೆ ನೆನಪಿನಿಂದ ಮಾಸುವ ಮುನ್ನವೇ ನಗರದಲ್ಲಿ ಕೂಡ ಕಾರ್ ಸ್ಟೀರಿಯೋ ಕದ್ದ ಯುವಕನೊಬ್ಬನನ್ನು ಸಾರ್ವಜನಿಕರು ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವರದಿಯಾಗಿದೆ.
ಇಲ್ಲಿನ ಚಾಮರಾಜಪೇಟೆಯಲ್ಲಿ ಕಾರಿನಲ್ಲಿದ್ದ ಸ್ಟೀರಿಯೊವನ್ನು ಯುವಕನೊಬ್ಬ ಕದ್ದಿದ್ದ, ಆತನನ್ನು ಸೆರೆಹಿಡಿದ ಕೂಡಲೇ ನೆರೆದಿದ್ದ ಜನ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದರು.ಕೊನೆಗೆ ಪೊಲೀಸರೇ ಬಂದು ಅವನನ್ನು ಸಾರ್ವಜನಿಕರ ಹೊಡೆತದಿಂದ ರಕ್ಷಿಸಿದ್ದರು.
ಘಟನೆ ವಿವರ: ಚಾಮರಾಜಪೇಟೆಯ 3ನೇ ಮುಖ್ಯ ರಸ್ತೆಯ ಸಮೀಪದ ಪ್ರಸಿದ್ಧ ಶ್ರೀರಾಮೇಶ್ವರ ದೇವಾಲಯದ ಮುಂಭಾಗ ಗುರುವಾರ ಟ್ರಾನ್ಸ್‌ಫೋರ್ಟ್ ಗುತ್ತಿಗೆದಾರ ಕೆ.ಸುರೇಶ್ ಎಂಬವರು ತಮ್ಮ ಮಾರುತಿ 800 ಕಾರಿನ ಬಳಿ ಬಂದು ಡೋರ್ ಓಪನ್ ಮಾಡಿ ಒಳಗೆ ಕುಳಿತಾಗ. ಅವರಿಗೆ ಅಚ್ಚರಿಯಾಗಿತ್ತು. ಯಾಕೆಂದರೆ ಕಾರಿನೊಳಗೆ ಅಪರಿಚಿತ ಯುವಕ ಕುಳಿತಿದ್ದ. ಆತ ಕಾರ್ ಸ್ಟೀರಿಯೋ ಕಳಚಲು ಯತ್ನಿಸುತ್ತಿದ್ದ. ಕೂಡಲೇ ಆತನನ್ನು ಹಿಡಿದು ಹೊರಗೆಳೆದು ಕೂಗಿದಾಗ, ಜನ ಸೇರಿದ್ದರು.
ಆ ಸಂದರ್ಭದಲ್ಲಿ ಸಿಟ್ಟಿಗೆದ್ದ ಸಾರ್ವಜನಿಕರು ಆತನನ್ನು ಸಾಯುವ ಹಾಗೆ ಸುಮಾರು 15ನಿಮಿಷಗಳ ಕಾಲ ಬಡಿದಿದ್ದರು. ನಂತರ ಸುದ್ದಿ ತಿಳಿದ ಪೊಲೀಸರು ಆತನನ್ನು ಅಪಾಯದಿಂದ ಪಾರು ಮಾಡಿದ್ದರು. ಕಾರು ಕದ್ದವನನ್ನು ಎಂ.ವಿ.ವಿರುಪಾಕ್ಷ ಎಂದು ಗುರುತಿಸಲಾಗಿದೆ.
ಜನರು ಸಿಟ್ಟು ಸಾಮಾನ್ಯದ್ದಾಗಿರಲಿಲ್ಲ ಮೈಮೇಲಿದ್ದ ಬಟ್ಟೆಯನ್ನೆಲ್ಲಾ ಕಿತ್ತೆಸೆದು ಒಳಚಡ್ಡಿಯಲ್ಲಿ ನಿಲ್ಲಿಸಿ ಅಮಾನುಷ ರೀತಿಯಲ್ಲಿ ಥಳಿಸಿದ್ದರು.
ಕೆಲ ಹೊತ್ತಿನ ನಂತರ ಪೊಲೀಸರು ಬಂದು ಆತನನ್ನು ಸಾರ್ವಜನಿಕರ ಕಪಿಮುಷ್ಠಿಯಿಂದ ಬಿಡಿಸಿದ್ದರು. ಈ ಸಂದರ್ಭದಲ್ಲಿ ಕಾರಿನ ಮಾಲೀಕ ಸುರೇಶ್, ಸಾರ್ವಜನಿಕರ ವರ್ತನೆ ಕುರಿತಂತೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಏತನ್ಮಧ್ಯೆ ಕಾರು ಕದ್ದ ವಿರೂಪಾಕ್ಷನನ್ನು ಬಿಟ್ಟಾಗ, ಸುರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ತದನಂತರ ವಿರೂಪಾಕ್ಷನನ್ನು ಹೊಯ್ಸಳ ಜೀಪ್‌ನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು. ಆದರೂ ನೆರೆದಿದ್ದ ಸಾರ್ವಜನಿಕರು ಮಾತ್ರ ಹೀಗೆ ಸಾರ್ವಜನಿಕವಾಗಿ ವಸ್ತುವನ್ನು ಕದ್ದ ವ್ಯಕ್ತಿಯನ್ನು ಹೊಡೆಯುವುದು ಸರಿಯಾ? ತಪ್ಪಾ? ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು ಎಂಬ ಚರ್ಚೆ ಮುಂದುವರಿದಿತ್ತು.