ಮೈಸೂರಿನ ಜುಲೈ 2ರಂದು ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ 113ಮಂದಿಯನ್ನು ಬಂಧಿಸಿರುವುದಕ್ಕೆ ಪೊಲೀಸರನ್ನು ಹೈಕೋರ್ಟ್ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.
ಶಾಂತಿಗೆ ಭಂಗ ತರುವಂತಹ ಕೆಲಸ ಮಾಡಿರುವ ಆರೋಪ ಇದ್ದಲ್ಲಿ ಅಂಥವರನ್ನು 24ಗಂಟೆಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಬಾರದು ಎನ್ನುವುದು ನಿಯಮ. ಆದರೆ ಜುಲೈ 10ರಿಂದ ಇಲ್ಲಿಯವರೆಗೂ ಅವರನ್ನು ಬಂಧನದಲ್ಲಿ ಇರಿಸಲಾಗಿದೆ. ಇದು ಸರಿಯಲ್ಲ ಎಂದು ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಯಾವ ಅಧಿಕಾರದ ಮೇಲೆ ಇವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ಪ್ರಮಾಣ ಪತ್ರದ ಮೂಲಕ ಕೋರ್ಟ್‌ಗೆ ವಿವರಿಸುವಂತೆ ಮೈಸೂರು ಜಿಲ್ಲಾ ಪ್ರಧಾನ ಮ್ಯಾಜಿಸ್ಟ್ರೇಟ್ ಅವರಿಗೆ ಪೀಠ ಸೂಚಿಸಿದೆ.
ಕ್ಯಾತಮಾರನಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಕೆಎಫ್‌ಡಿ ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ದೂರಿ ಮೈಸೂರಿನ ಮಂಡಿ ಮೊಹಲ್ಲಾದ ನೂರ್ ಜಹಾನ್ ಹಾಗೂ ಇತರರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ತಿಳಿಸಿದೆ.
ಶಾಂತಿ ಕದಡುವ ಕೆಲಸ ಆಗಿದ್ದರೆ, ಅದನ್ನು ಶಮನ ಮಾಡಲು ಸಮಿತಿ ರಚನೆ ಮಾಡುವುದು ಸರ್ಕಾರದ ಕೆಲಸ. ಅದನ್ನು ಬಿಟ್ಟು ಒಂದು ಕೋಮಿಗೆ ಸೇರಿದ ಗುಂಪನ್ನು ಮಾತ್ರ ಬಂಧನದಲ್ಲಿ ಇರಿಸಿ, ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುವುದು ಸರಿಯಲ್ಲ. ಒಂದು ವೇಳೆ ಆರೋಪಿಗಳು ಶಾಂತಿ ಕದಡುವ ಕೆಲಸ ಮಾಡಿದ್ದೇ ಹೌದಾಗಿದ್ದಲ್ಲಿ ಸೂಕ್ತ ಕಲಮಿನ ಅಡಿ ಪ್ರಕರಣ ದಾಖಲಿಸಿ ಬಂಧನದಲ್ಲಿ ಇರಿಸಬಹುದೇ ವಿನಾ ಅನಗತ್ಯವಾಗಿ ಈ ರೀತಿ ಯಾವುದ್ಯಾವುದೋ ಕಲಮುಗಳ ಅಡಿ ಇರಿಸುವುದು ಸರಿಯಲ್ಲ ಎಂದು ಪೀಠ ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿತು.
ಸದ್ಯ ಬೆಳಗಾವಿಯ ಜೈಲಿನಲ್ಲಿರುವವರ ಬಂಧನವನ್ನು ಆಗಸ್ಟ್ 6ರವರೆಗೆ ಮ್ಯಾಜಿಸ್ಟ್ರೇಟ್ ವಿಸ್ತರಿಸಿದ್ದು, ಅವರನ್ನು ಮೊದಲೇ ಬಿಡುಗಡೆ ಮಾಡಿ ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರಿಗೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ವಿವಾದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಮ್ಯಾಜಿಸ್ಟ್ರೇಟ್ ಅವರಿಗೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಮುಂದೂಡಿದೆ.