ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಜೆಡಿಎಸ್ ತಾರಾ ಪ್ರಚಾರಕರಾಗುವ ಮೂಲಕ ಸಿಂಧ್ಯ ಅವರು ಮರಳಿ ಜೆಡಿಎಸ್ ಪಾಳಯಕ್ಕೆ ಸೇರ್ಪಡೆಗೊಳ್ಳುವುದಕ್ಕೆ ವೇದಿಕೆ ಸಿದ್ದಗೊಂಡಂತಾಗಿದೆ.
ಜನತಾಪರಿವಾರದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಸಿಂಧ್ಯ ಶೀಘ್ರದಲ್ಲೇ ಜೆಡಿಎಸ್‌ಗೆ ಮರಳುವ ಸಾಧ್ಯತೆ ಇದೆ. ಸಿಂಧ್ಯ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಪದ್ಮನಾಭನಗರದಲ್ಲಿರುವ ಗೌಡರ ನಿವಾಸದಲ್ಲಿ ಈ ಸಂಬಂಧ ಇತ್ತೀಚೆಗೆ ಮೂವರೂ ಮಾತುಕತೆ ನಡೆಸಿದ್ದಾರೆ.
ಜೆಡಿಎಸ್, ರಾಜ್ಯದ ಮುಖ್ಯಚುನಾವಣಾಧಿಕಾರಿಗೆ ಸಲ್ಲಿಸಿರುವ ಪಕ್ಷದ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸಿಂಧ್ಯ ಅವರ ಹೆಸರನ್ನೂ ಸೇರಿಸಲಾಗಿದೆ. ಸಿಂಧ್ಯ ಅವರು ಜೆಡಿಎಸ್‌ಗೆ ಮರಳುವ ಮಾತು ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಈ ಉಪ ಚುನಾವಣೆಯಲ್ಲಿ ರಾಮನಗರ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಅವರನ್ನೇ ಕಣಕ್ಕಿಳಿಸುವ ಬಗ್ಗೆಯೂ ಗೌಡರು ಚಿಂತನೆ ನಡೆಸಿದ್ದರು. ಆದರೆ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ ಕಾರಣ ರಾಜು ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು ಎನ್ನಲಾಗಿದೆ.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರು ಮಾಯಾವತಿ ಅವರ ಬಿಎಸ್ಪಿ ಪಕ್ಷಕ್ಕೆ ಸೇರಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಆ ಹುದ್ದೆಯಿಂದ ವಜಾಗೊಂಡು ಪಕ್ಷದಿಂದಲೇ ಉಚ್ಛಾಟನೆಯಾಗಿದ್ದರು.