ಕೃಷ್ಣರಾಜಸಾಗರ ಅಣೆಕಟ್ಟಿಗೆ ಸಮೀಪದಲ್ಲಿರುವ ಗ್ರಾಮವೊಂದರ ಮನೆ ಮೇಲೆ ದಾಳಿ ನಡೆಸಿದ ಕೆಆರ್ಎಸ್ ಪೊಲೀಸರು 52 ಮೂಟೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಮೋನಿಯಂ ನೈಟ್ರೇಟ್ ಮತ್ತು ಜೆಲೆಟಿನ್ ಕಡ್ಡಿಗಳಂಥ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು, ಕಟ್ಟೇರಿ ಗ್ರಾಮದ ಕರೀಗೌಡರ ಪುತ್ರ ಹನುಮಂತೇಗೌಡ ಮನೆಯಲ್ಲಿ ಸ್ಫೋಟಕ ಸಾಮಗ್ರಿಗಳನ್ನು ತುಂಬಿದ್ದ ಚೀಲಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸ್ಫೋಟಕಗಳನ್ನು ಪಾಂಡವಪುರ ಮತ್ತು ಶ್ರೀರಂಗಪಟ್ಟಣದ ಕೆಲವು ಪ್ರದೇಶಗಳಲ್ಲಿ ಗಣಿಗಾರಿಕೆಗೆ ಬಳಸಲಾಗುತ್ತಿತ್ತು. ಮನೆಯಲ್ಲಿ ಶೇಖರಿಸಿದ್ದ ಸ್ಫೋಟಕಗಳನ್ನು ಬಿಡಿ, ಬಿಡಿಯಾಗಿ ಮಾರಾಟ ಮಾಡುವ ವ್ಯವಸ್ಥೆಯೂ ನಡೆಯುತ್ತಿತ್ತು.
ಇದಕ್ಕೆ ಸಂಬಂಧಪಟ್ಟ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧಕಾರ್ಯ ಮುಂದುವರಿದಿದೆ. ಇದೊಂದು ತೀವ್ರ ಅಪಾಯಕಾರಿಯಾಗಿದ್ದು, ಒಂದು ವೇಳೆ ಭಾರಿ ಪ್ರಮಾಣದ ಈ ಸ್ಫೋಟ ಸಂಭವಿಸಿದ್ದರೆ ಅಣೆಕಟ್ಟೆಗೂ ಧಕ್ಕೆಯಾಗುವ ಸಂಭವ ಇತ್ತು ಎನ್ನಲಾಗಿದೆ.