ಬೆಂಗಳೂರಿನಲ್ಲಿ ಇಸ್ಕಾನ್ ದೇವಾಲಯದ ಒಡೆತನದ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರಿಗೆ ಮತ್ತೊಂದು ಅನಾಮಧೇಯ ಪತ್ರ ಬಂದಿದೆ. ಆದರೆ ಪತ್ರದಲ್ಲೇನಿದೆ ಎಂಬುದನ್ನು ನ್ಯಾಯಮೂರ್ತಿಗಳು ಬಹಿರಂಗಪಡಿಸಿಲ್ಲ.
ಇಸ್ಕಾನ್ ದೇವಾಲಯದ ಒಡೆತನಕ್ಕೆ ಸಂಬಂಧಿಸಿದಂತೆ ನ್ಯಾ.ಕೆ.ಎಲ್.ಮಂಜುನಾಥ್ ಅವರಿಗೆ ಈಗಾಗಲೇ ಬ್ಲ್ಯಾಕ್‌ಮೇಲ್ ಪತ್ರ ಬಂದಿದ್ದು, ಈ ಪತ್ರ ಕುರಿತು ವಿವಾದ ಆರುವ ಮುನ್ನವೇ ಮತ್ತೊಂದು ಪತ್ರ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಬಂದಿದ್ದ ಬ್ಲ್ಯಾಕ್‌ಮೇಲ್ ಪತ್ರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಗಳು, ಯಾರು ಪತ್ರ ಬರೆದಿದ್ದಾರೆ ಎಂಬ ಬಗ್ಗೆ ಸಿಬಿಐ ತನಿಖೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದರು. ಪತ್ರ ಪ್ರಕರಣವನ್ನು ವಿವಾದವಾಗಿ ಮಾಡದೆ ಅಲ್ಲಿಗೆ ಕೈಬಿಡುವಂತೆ ಬೆಂಗಳೂರು ಇಸ್ಕಾನ್ ಪರ ವಕೀಲರು ನ್ಯಾಯಮೂರ್ತಿಗಳನ್ನು ಕೋರಿದ್ದರು.
ಏತನ್ಮಧ್ಯೆ ಮುಂಬೈ ಇಸ್ಕಾನ್ ಪರ ಹಿರಿಯ ವಕೀಲ ಮಾಜಿ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಹೈಕೋರ್ಟ್‌ನಲ್ಲಿ ಕೋರಿಕೆ ಸಲ್ಲಿಸಿ, ನ್ಯಾಯಮೂರ್ತಿಗಳಿಗೆ ಬ್ಲ್ಯಾಕ್‌ಮೇಲ್ ಪತ್ರ ಬರೆದಿರುವ ಬಗ್ಗೆ ಸಿಬಿಐ ತನಿಖೆ ನಡೆಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದೂ ಹೇಳಿದ್ದಾರೆ.
ಶುಕ್ರವಾರ ಇಸ್ಕಾನ್ ಒಡೆತನಕ್ಕೆ ಸಂಬಂಧಿಸಿದಂತೆ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾ.ಕೆ.ಎಲ್.ಮಂಜುನಾಥ್, ವಿವಾದ ಕುರಿತು ತಮಗೆ ಇನ್ನೊಂದು ಪತ್ರ ಬಂದಿರುವುದನ್ನು ಬಹಿರಂಗಪಡಿಸಿದರು. ಆದರೆ, ಪತ್ರದಲ್ಲಿ ಏನಿದೆ ಎಂಬುದನ್ನು ಹೇಳಲಿಲ್ಲ. ತಮಗೆ ಈ ಹಿಂದೆ ಬ್ಲ್ಯಾಕ್‌ಮೇಲ್ ಪತ್ರ ಬರೆದಿರುವ ಬಗ್ಗೆ ಮುಂಬೈ ಇಸ್ಕಾನ್ ವಿವರಣೆ ನೀಡಿದ್ದರೂ ಬೆಂಗಳೂರು ಇಸ್ಕಾನ್ ಪರ ವಕೀಲರು ವಿವರಣೆ ನೀಡಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅವರು ವಿಚಾರಣೆಯನ್ನು ಮುಂದೂಡಿದರು.
ಬೆಂಗಳೂರಿನಲ್ಲಿರುವ ಇಸ್ಕಾನ್ ದೇವಾಲಯದ ಒಡೆತನದ ಬಗ್ಗೆ ಮುಂಬೈ ಇಸ್ಕಾನ್ ಮತ್ತು ಬೆಂಗಳೂರು ಇಸ್ಕಾನ್ ಮಧ್ಯೆ ವಿವಾದವಿದ್ದು, ಅಧೀನ ನ್ಯಾಯಾಲಯ ಬೆಂಗಳೂರು ಇಸ್ಕಾನ್ ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮುಂಬೈ ಇಸ್ಕಾನ್ ಹೈಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು.