ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕದಿಂದ ನಗರದಲ್ಲಿ ಶುಕ್ರವಾರ ನಡೆದ 10ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡುತ್ತ, ಮಿತ ಸಂತಾನಕ್ಕೆ ಕರೆ ನೀಡಿ ಒಂದು ಮಗು ಸಾಕು ಎಂದು ಹೇಳಿದರೆ, ಅದೇ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲ...ಇಲ್ಲ ಎರಡು ಮಕ್ಕಳು ಬೇಕು ಎಂದು ತಿಳಿಸುವ ಮೂಲಕ ವಿಭಿನ್ನ ಹೇಳಿಕೆ ವ್ಯಕ್ತವಾಗಿತ್ತು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು ಮತ್ತು ಮುಖ್ಯಮಂತ್ರಿಗಳು ನವ ವಧು-ವರರಿಗೆ ಈ ರೀತಿಯಲ್ಲಿ ಶುಭ ಹಾರೈಸಿದರು.
ಶ್ರೀರಾಮುಲು ಮಾತನಾಡುವಾಗ, ಮಿತ ಸಂತಾನಕ್ಕೆ ಕರೆ ನೀಡಿ ಒಂದೇ ಮಗು ಸಾಕು ಎಂದು ಹೇಳಿದ್ದರು. ಆದರೆ ನಂತರ ಮಾತನಾಡಿದ ಯಡಿಯೂರಪ್ಪ, ಆರೋಗ್ಯ ಸಚಿವರ ಮಾತು ಹಾಗಿರಲಿ ಎನ್ನುತ್ತಲೇ, ಒಂದು ಆರತಿಗೆ ಮತ್ತೊಂದು ಕೀರ್ತಿಗೆ ಎಂಬಂತೆ ಎರಡು ಮಕ್ಕಳು ಬೇಕೆಂದು ಹೇಳಿ ಸಭಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ವಿಧಾನಸಭಾ ಅಧಿವೇಶನ ನಾಡಿನ ಜನರ ಸಮಸ್ಯೆ, ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಡುವ ದೇಗುಲವಾಗಬೇಕೇ ಹೊರತು, ಕುಸ್ತಿ ಅಖಾಡವಾಗಬಾರದು ಎನ್ನುವ ಮೂಲಕ ವಿಧಾನ ಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷಗಳ ವರ್ತನೆ ಬಗ್ಗೆ ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.