ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಪುತ್ತೂರು ಕುಟ್ರುಪಾಡಿ ಸೈಂಟ್ ಮೇರಿ ಚರ್ಚ್ ಪಾದ್ರಿ ಕಣ್ಣೂರಿನ ಜೇಮ್ಸ್ ಮುಗಳೇಳ್ (39) ಅವರ ಕುಟುಂಬ ವರ್ಗ ಜೇಮ್ಸ್ ಅವರ ಶವದ ಮತ್ತೊಂದು ಮರಣೋತ್ತರ (ಪೋಸ್ಟ್ ಮಾರ್ಟ್‌ಮ್) ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.
ಚರ್ಚ್ ಪಾದ್ರಿಯಾಗಿದ್ದ ಜೇಮ್ಸ್ ಅವರ ಶವ ಕುಂಡಾಡಿ ಎಂಬಲ್ಲಿನ ರಸ್ತೆ ಸಮೀಪದ ಕೆಸರಿನಲ್ಲಿ ಪತ್ತೆಯಾಗಿತ್ತು. ಬುಧವಾರ ಚಾರ್ಮಾಡಿಯ ಮುದ್ದುಡಿ ಎಂಬಲ್ಲಿ ಮಥಾಯಿ ಎಂಬುವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಬಳಿಕ ಅವರು ಅಲ್ಲಿಂದ ತೋಟತ್ತಾಡಿ ಎಂಬಲ್ಲಿಗೆ ಬಂದು ಅಲ್ಲಿನ ಅನಾರೋಗ್ಯಪೀಡಿತ ಕೆಲ ಕ್ರೈಸ್ತ ಬಂಧುಗಳ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದರು.
ಅಲ್ಲಿಂದ ರಾತ್ರಿಯೇ ಚಾರ್ಮಾಡಿಗೆ ಬಂದು ಅಲ್ಲಿನ ಕಾನ್ವೆಂಟ್ ಒಂದರಲ್ಲಿ ಊಟ ಮುಗಿಸಿ, ಅಲ್ಲಿನವರಿಗೆ ಮರಳಿ ಕೊಟ್ರುಪಾಡಿಗೆ ಹೋಗುತ್ತೇನೆ ಎಂದು ತಿಳಿಸಿ ಬೈಕ್‌ನಲ್ಲಿ ಹೊರಟಿದ್ದರು.
ಆದರೆ ಬೈಕನ್ನೇರಿದ ಜೇಮ್ಸ್ ಕೊಟ್ರುಪಾಡಿಗೆ ಹೋಗುವ ಬದಲು ತೋಟತ್ತಾಡಿಗೆ ಬಂದಿದ್ದರು ಎನ್ನಲಾಗುತ್ತಿದೆ. ತೋಟತ್ತಾಡಿಯ ಕುಂಡಾಡಿ ಎಂಬಲ್ಲಿ ರಸ್ತೆ ಪಕ್ಕದಲ್ಲಿ ಕೆಸರಿನ ಪರಿಸರದಲ್ಲಿ ಜೇಮ್ಸ್ ಮೃತದೇಹ ನಗ್ನಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ಬೈಕ್ ಶವದ ಪಕ್ಕದಲ್ಲಿ ಬಿದ್ದಿತ್ತು.
ಜೇಮ್ಸ್ ಅವರ ಶವದ ಮರಣೋತ್ತರ ಪರೀಕ್ಷೆಯನ್ನು ಇಬ್ಬರು ಸರ್ಕಾರಿ ವೈದ್ಯರಿಂದ ಈಗಾಗಲೇ ನಡೆಸಲಾಗಿದ್ದು, ನಾವು ವರದಿಗಾಗಿ ಕಾಯುತ್ತಿದ್ದು, ಪಾದ್ರಿ ಸಾವು ಅಸಹಜವೇ ಅಥವಾ ಕೊಲೆಯೇ ಎಂಬುದು ತಿಳಿಯಲಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಾವ್ ತಿಳಿಸಿದ್ದರು.