ಕಾರಿನಲ್ಲಿ ಸ್ಟೀರಿಯೊ ಕಳವು ಮಾಡಲು ಯತ್ನಿಸುತ್ತಿದ್ದಾನೆ ಎಂಬ ಅನುಮಾನದಿಂದ ಸಾರ್ವಜನಿಕರಿಂದ ಏಟು ತಿಂದ ಯುವಕ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಚಾಮರಾಜಪೇಟೆ 3ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ರಾಮೇಶ್ವರ ದೇವಸ್ಥಾನದ ಬಳಿ ತಪ್ಪು ತಿಳಿವಳಿಕೆಯಿಂದ ಏಟು ತಿಂದ ಎಂ.ಎಸ್.ವಿರೂಪಾಕ್ಷ ಬೆಂಗಳೂರಿನ ಐಟಿ ಪಾರ್ಕ್‌ನಲ್ಲಿನ ಇಂಟರ್‌ಟೈಟಲ್ ಕಂಪನಿಯ ಮಾಜಿ ಉದ್ಯೋಗಿ. ನರ ದೌರ್ಬಲ್ಯದಿಂದಾಗಿ ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಮ್ಮೆ ಲೇಸರ್ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದಾನೆ ಎಂಬುದು ದಾಖಲೆಗಳಿಂದ ಸ್ಪಷ್ಟವಾಗಿದೆ.
ಈತನಿಗೆ ಹೊಡೆದರು ಎನ್ನಲಾದ ಸಾರ್ವಜನಿಕರಾಗಲಿ, ಕಾರಿನ ಮಾಲೀಕ-ಗುತ್ತಿಗೆದಾರ ಕೆ.ಸುರೇಶ್ ಅವರಾಗಲೀ ಈತನ ಮೇಲೆ ದೂರು ದಾಖಲಿಸಲು ಪೊಲೀಸ್ ಠಾಣೆಯ ತನಕ ಬರಲಿಲ್ಲ. ತನಗೆ ಹೊಡೆದವರ ವಿರುದ್ಧ ಯಾವುದೇ ದೂರು ದಾಖಲಿಸಲು ಏಟು ತಿಂದ ವಿರೂಪಾಕ್ಷನೂ ಇಚ್ಛಿಸಲಿಲ್ಲ ಎಂದು ಅವನನ್ನು ರಕ್ಷಿಸಿದ ಸೆಂಟ್ರಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಸ್ಟೀರಿಯೊ ಕದಿಯುತ್ತಿರುವಾಗ ಕಳ್ಳನೊಬ್ಬ ಸಿಕ್ಕು ಬಿದ್ದು ಸಾರ್ವಜನಿಕರಿಂದ ಏಟು ತಿನ್ನುತ್ತಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದೆವು. ಸಾರ್ವಜನಿಕರಿಂದ ಯುವಕನನ್ನು ರಕ್ಷಿಸಿದೆವು. ಆದರೆ, ಒಬ್ಬ ಸಾರ್ವಜನಿಕರೂ ಠಾಣೆಗೆ ಬರಲಿಲ್ಲ. ಯಾರೂ ದೂರು ನೀಡಲೂ ಇಲ್ಲ. ಆದ್ದರಿಂದ ಅವನನ್ನು ಬಿಡುಗಡೆ ಮಾಡಿದೆವು ಎನ್ನುತ್ತಾರೆ ಪೊಲೀಸರು.