ಭಯೋತ್ಪಾದನೆ ಚಟುವಟಿಕೆ ಹತ್ತಿಕ್ಕಲು ಭಾರತ ಸರ್ಕಾರ ಪಾಕಿಸ್ತಾನದ ಐಎಸ್ಐ ಜೊತೆ ಮಾತುಕತೆ ನಡೆಸಕೂಡದೆಂದು ಕೇಂದ್ರ ಮಾಜಿ ಸಚಿವೆ, ಲೋಕಸಭೆ ಪ್ರತಿಪಕ್ಷ ಉಪನಾಯಕಿ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕುವ ಕುರಿತು ಭಾರತ ಕೇವಲ ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕೇ ವಿನಃ ಐಎಸ್ಐ ಜೊತೆಗಲ್ಲ. ಒಂದು ವೇಳೆ ಅದರ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರೆ ಬಹು ದೊಡ್ಡ ಲೋಪವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಈ ಹಿಂದೆ ಎನ್‌ಡಿಎ ಸರ್ಕಾರವೂ ವಿರೋಧಿಸಿತ್ತು. ಐಎಸ್ಐ ಮೂಲಕ ಮಾತುಕತೆಗೆ ಪಾಕಿಸ್ತಾನ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಉಗ್ರ ಚಟುವಟಿಕೆಗಳಿಗೆ ಕಟ್ಟುನಿಟ್ಟಾಗಿ ಕಡಿವಾಣ ಹಾಕುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಬೇಕಿದ್ದ ಕೇಂದ್ರ ಸರ್ಕಾರ, ಬಲೂಚಿಸ್ತಾನ್ ವಿಷಯವನ್ನು ಮಧ್ಯ ತಂದು ಮೃದು ಧೋರಣೆ ತಾಳುತ್ತಿದೆ. ದುರ್ಬಲ ವಿದೇಶಾಂಗ ನೀತಿ ಎದುರು ಕೇಂದ್ರ ಸರ್ಕಾರ ತಲೆತಗ್ಗಿಸಿದಂತಾಗಿದೆ ಎಂದು ದೂರಿದರು.