ಪಕ್ಷದಲ್ಲಿ ಯಾವುದೇ ಕಾರಣಕ್ಕೆ ಅಶಿಸ್ತು, ಭಿನ್ನಮತ ಸಹಿಸುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಗಣಿ ಧಣಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಯಾರಿಂದಲೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಆಗಲಿ ಅಥವಾ ಜೆಡಿಎಸ್‌ನಿಂದಾಗಲಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಫಲಿಸಲು ಎಂದು ಹೇಳಿದರು.
ಕರ್ನಾಟಕದಲ್ಲಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಅರಿವು ಇದೆ. ದಿನನಿತ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದೆ. ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಎರಡೆರಡು ಬಾರಿ ಹೇಳಿ ಭಿನ್ನಮತೀಯ ಚಟುವಟಿಕೆ ನಡೆಸುವವರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪಕ್ಷ ಹಾಗೂ ಸರ್ಕಾರದ ನಡುವೆ ಉತ್ತಮ ಸಂಬಂಧವಿದೆ. ಹಲವಾರು ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಈ ಮಾತನ್ನು ಹೇಳುತ್ತಿರುವೆ. ಈ ಮಾದರಿಯ ಸಮನ್ವಯತೆ, ಸಾಮರಸ್ಯ ಇರುವುದು ಅಪರೂಪ ಎಂದು ಹೇಳಿ ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷ ಸದಾನಂದ ಗೌಡ ಅವರು ಅಭಿನಂದನಾರ್ಹರು ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಸಂದೇಶವನ್ನು ನೀಡಿದೆ. ರಾಷ್ಟ್ರದಲ್ಲಿ ದ್ವಿಪಕ್ಷಗಳ ವ್ಯವಸ್ಥೆ ಇರಬೇಕೆಂಬುದು ಜನರು ನೀಡಿರುವ ಸಂದೇಶ. ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡದೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.
ಕಳೆದ ಚುನಾವಣೆಯಲ್ಲಿ ಪಕ್ಷ ಸೋತಿದ್ದಕ್ಕೆ ಪಕ್ಷದಲ್ಲಿನ ತತ್ವ ಸಿದ್ದಾಂತ ಬದಲಾಗಬೇಕೆಂದು ವಾದಿಸಿದ್ದಾರೆ. ಆದರೆ ಇದನ್ನು ನಾನು ಒಪ್ಪುವುದಿಲ್ಲ. ಹಿಂದುತ್ವ ವಿಚಾರದಲ್ಲಿ ರಾಜೀ ಪ್ರಶ್ನೆಯೇ ಇಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.