ಬಳ್ಳಾರಿಯ ಗಣಿಧಣಿ, ರಾಜ್ಯದ ಸಚಿವರಾಗಿರುವ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಚುನಾವಣಾ ಆಯೋಗ ದಾಖಲು ಮಾಡಿಕೊಂಡಿರುವ ಕ್ರಿಮಿನಲ್ ಪ್ರಕರಣವನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಕಾಂಗ್ರೆಸ್ ಶನಿವಾರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ, ಈ ಬಗ್ಗೆ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದೆ.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ತಿಂಗಳು, ಸಚಿವರಾದ ಜಿ.ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ ಮತ್ತು ಬಿ.ಶ್ರೀರಾಮುಲು ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆದಿತ್ತು. ಈ ನಿರ್ಧಾರ ವಿರೋಧಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಇಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಮೇಲ್ಮನೆ ನಾಯಕ ಉಗ್ರಪ್ಪ, ಬಿ.ಎಲ್.ಶಂಕರ್, ಎಚ್.ಎಂ.ರೇವಣ್ಣ, ಶಾಸಕ ನೆ.ಲ.ನರೇಂದ್ರಬಾಬು, ಎಸ್.ಟಿ.ಸೋಮಶೇಖರ ಮುಂತಾದ ಮುಖಂಡರೊಂದಿಗೆ ಚುನಾವಣಾ ಆಯೋಗಕ್ಕೆ ತೆರಳಿ, ರಾಜಕೀಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಮೂರು ಸಚಿವರ ವಿರುದ್ಧದ ಪ್ರಕರಣವನ್ನು ಹಿಂದಕ್ಕೆ ಪಡೆದಿದೆ. ಚುನಾವಣಾ ಆಯೋಗ ದಾಖಲು ಮಾಡಿರುವ ಈ ಪ್ರಕರಣ ಹಿಂದಕ್ಕೆ ಪಡೆದರೆ, ಆಯೋಗದ ಮೇಲಿರುವ ವಿಶ್ವಾಸ ಜನರಿಂದ ದೂರವಾಗುತ್ತದೆ. ಕೂಡಲೇ ಆಯೋಗ ಮಧ್ಯೆ ಪ್ರವೇಶಿಸಿ ಈ ಪ್ರಕರಣವನ್ನು ಹಿಂಪಡೆಯದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅವರು ಒತ್ತಾಯಿಸಿದರು.
ಚುನಾವಣಾ ಆಯೋಗ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಪ್ರಕರಣಗಳನ್ನು ದಾಖಲು ಮಾಡುವುದು ಒಂದೆಡೆಯಾದರೆ, ಅಂತಹ ಪ್ರಕರಣಗಳನ್ನು ಸರ್ಕಾರ ಹಿಂದಕ್ಕೆ ಪಡೆದರೆ ಆಯೋಗ ಹಲ್ಲು ಕಿತ್ತ ಹಾವಿನಂತಾಗುತ್ತದೆ ಎಂದು ಕಾಂಗ್ರೆಸ್ ದೂರಿದೆ.
ಅಲ್ಲದೇ ಗೋವಿಂದರಾಜ ನಗರ ವಿಧಾನಸಭೆ ಉಪಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕಾದರೆ ಸಚಿವ ಸೋಮಣ್ಣ ಅವರ ಕೃಪಾಕಟಾಕ್ಷದಿಂದ ಕಳೆದ 15ವರ್ಷಗಳಿಂದ ತಳ ಊರಿರುವ ಇಬ್ಬರು ಎಸಿಪಿಗಳಾದ ಹನುಮಂತಪ್ಪ, ದುರ್ಗಯ್ಯ ತಕ್ಷಣ ವರ್ಗಾವಣೆ ಮಾಡಬೇಕೆಂದು ರಾಜ್ಯ ಚುನಾವಣಾಧಿಕಾರಿ ಸಿ.ಎಸ್.ಸುರಂಜನಾ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.