ರಾಜ್ಯದ ಐದು ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ 25ಮಂದಿ ಅಭ್ಯರ್ಥಿಗಳು ಶನಿವಾರ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದು, ಇದೀಗ ಕಣದಲ್ಲಿ ಅಂತಿಮವಾಗಿ 71 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಏತನ್ಮಧ್ಯೆ ರಾಜ್ಯದ ಗಮನ ಸೆಳೆದಿರುವ ಬೆಂಗಳೂರಿನ ಗೋವಿಂದರಾಜ ನಗರ ಚುನಾವಣಾಧಿಕಾರಿಯನ್ನು ಬದಲಿಸಲಾಗಿದೆ. ಅಂತಿಮವಾಗಿ ಗೋವಿಂದರಾಜನಗರದಲ್ಲಿ ಅತಿ ಹೆಚ್ಚು (27), ಮತ್ತು ಚಿತ್ತಾಪುರದಲ್ಲಿ ಅತಿ ಕಡಿಮೆ(9) ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅತಿ ಹೆಚ್ಚು ಅಭ್ಯರ್ಥಿಗಳು ಇರುವ ಕಾರಣ ಗೋವಿಂದರಾಜನಗರದಲ್ಲಿ ಮತದಾನದ ದಿನ ಎರಡು ಮತಯಂತ್ರಗಳಿರುತ್ತವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾಧಿಕಾರಿ ಸಿ.ಎಸ್.ಸುರಂಜನ್, ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾದ ಶನಿವಾರ 25 ಅಭ್ಯರ್ಥಿಗಳು ತಮ್ಮ ನಾಪಪತ್ರ ಹಿಂಪಡೆದಿದ್ದಾರೆ ಎಂದು ತಿಳಿಸಿದರು.
ವಸತಿ ಸಚಿವ ಸೋಮಣ್ಣ ಸ್ಪರ್ಧಿಸಿರುವ ಗೋವಿಂದರಾಜನಗರದಲ್ಲಿ 27, ರಾಮನಗರ-13, ಕೊಳ್ಳೇಗಾಲ-12, ಚನ್ನಪಟ್ಟಣ-10 ಮತ್ತು ಚಿತ್ತಾಪುರದಲ್ಲಿ 9ಮಂದಿ ತಮ್ಮ ರಾಜಕೀಯ ಭವಿಷ್ಯ ಪಣಕ್ಕಿಟ್ಟಿದ್ದಾರೆ.
ಬಿಜೆಪಿ-ಕಾಂಗ್ರೆಸ್ ವಿರುದ್ಧು ದೂರು: ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ವಿರುದ್ಧ ತಲಾ 2ದೂರುಗಳು ಚುನಾವಣೆ ಆಯೋಗದಲ್ಲಿ ದಾಖಲಾಗಿವೆ. ಅಲ್ಲದೇ, ಇನ್ನಿತರೆ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳ ವಿರುದ್ಧ 8ಪ್ರಕರಣಗಳು ದಾಖಲಾಗಿದ್ದು, 12,800 ರೂ.ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೊಳ್ಳೇಗಾಲ ಕ್ಷೇತ್ರವಿರುವ ಚಾಮರಾಜನಗರದಲ್ಲಿ 6ಪ್ರಕರಣ ದಾಖಲಾಗಿದ್ದು, 25,590 ರೂ.ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.