ವಿಶ್ವವಿಖ್ಯಾತ ಮೈಸೂರು ಅರಮನೆಗೆ ಅನಾಹುತ ಸಂಭವಿಸಲಿದೆ ಎಂಬ ಗಾಳಿ ಸುದ್ದಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಮನೆಗೆ ಹೆಚ್ಚಿನ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ತಮಿಳುನಾಡಿನ ಸೇಲಂನ ಬಸ್ ನಿಲ್ದಾಣದ ಹೋಟೆಲ್‌ನಲ್ಲಿ ಜುಲೈ 24ರಂದು ಮಧ್ನಾಹ್ನ ನಾಲ್ವರು ದುಷ್ಕರ್ಮಿಗಳ ತಂಡ ಕೆಆರ್‌ಎಸ್ ಜಲಾಶಯ ಮತ್ತು ಮೈಸೂರು ಅರಮನೆಗೆ ಅನಾಹುತ ಉಂಟು ಮಾಡುವ ಕುರಿತು ಚರ್ಚೆ ನಡೆಸುತ್ತಿದ್ದರೆನ್ನಲಾಗಿದೆ. ಪಕ್ಕದ ಟೇಬಲ್‌ನಲ್ಲೇ ಕುಳಿತು ಊಟ ಮಾಡುತ್ತಿದ್ದ ಪ್ರವಾಸಿಗರು ಇದನ್ನು ಕೇಳಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೊಬೈಲ್‌ಗೆ ಸಂದೇಶ ರವಾನಿಸಿದ್ದರು ಎನ್ನಲಾಗಿದೆ.
ಇದರಿಂದ ಅರಮನೆಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವುದರ ಜೊತೆಗೆ, ಮೈಸೂರಿಗೆ ಆಗಮಿಸುತ್ತಿರುವ ಪ್ರವಾಸಿಗರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ಪ್ರವಾಸಿಗರ ವಾಹನಗಳನ್ನು ತಪಾಸಣೆ ನಡೆಸಿದ ಬಳಿಕ ಒಳಬಿಡಲಾಗುತ್ತಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶದ ಮೇರೆಗೆ ಮುಂಜಾಗ್ರತ ಕ್ರಮವಾಗಿ ಅರಮನೆಗೆ ಪೊಲೀಸ್ ಭದ್ರತೆ ಹಾಕಲಾಗಿದೆ. ಅರಮನೆಯ ಪ್ರವೇಶ ದ್ವಾರದ ಮುಂಭಾಗ ಬ್ಯಾರಿಕೇಟ್‌ಗಳನ್ನು ಹಾಕಿ ಪ್ರವಾಸಿಗರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಲ್ಲದೇ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಕೆಆರ್‌ಎಸ್‌ಗೆ ಭದ್ರತೆ ಹೆಚ್ಚಳ:ಜಿಲ್ಲೆಯ ಕೃಷ್ಣರಾಜ ಸಾಗರ ಬಳಿಯ ಕಟ್ಟೇರಿ ಗ್ರಾಮದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದು, ಸ್ಫೋಟಕಗಳನ್ನು ಜಫ್ತಿ ಮಾಡಿರುವ ಪೊಲೀಸರು ಆತನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ. ಏತನ್ಮಧ್ಯೆ ಕೆಆರ್‌ಎಸ್ ಅಣೆಕಟ್ಟೆಯ ಭದ್ರತಾ ಕಾರ್ಯಕ್ಕಾಗಿ ಪೊಲೀಸ್ ಬಂದೋಬಸ್ತ್ ಅನ್ನು ಇಲಾಖೆ ಇನ್ನಷ್ಟು ಬಿಗಿಗೊಳಿಸಿದೆ. ಮೀಸಲು ಪೊಲೀಸ್ ಸೇರಿದಂತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.