ಮೈಸೂರು ಕೋಮುಗಲಭೆ ಹಿನ್ನೆಲೆಯಲ್ಲಿ ಕೆಎಫ್‌ಡಿ ಮತ್ತು ಕೆಪಿಎಫ್ ಸಂಘಟನೆಗಳಿಗೆ ರಾಜ್ಯದಲ್ಲಿ ನಿಷೇಧ ಹೇರಬೇಕು, ನಗರ, ಗ್ರಾಮೀಣ ಪ್ರದೇಶದಲ್ಲಿ ಲೋಡ್‌ಶೆಡ್ಡಿಂಗ್ ಬೇಡ ಎಂಬ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತಂತೆ ಭಾನುವಾರ ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಂಡಿದೆ.
ಶನಿವಾರದಿಂದ ನಗರದ ಚಾಮರಾಜಪೇಟೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭಗೊಂಡಿತ್ತು. ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ನಿನ್ನೆ ದೆಹಲಿಗೆ ವಾಪಸಾಗಿದ್ದರು. ಭಾನುವಾರದ ಎರಡನೇ ಹಾಗೂ ಅಂತಿಮ ದಿನದ ಸಭೆಯಲ್ಲಿ ವೆಂಕಯ್ಯ ನಾಯ್ಡು ಅವರ ನೇತೃದಲ್ಲಿ ಸಭೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿತು.
ಸಭೆಯಲ್ಲಿ ಮೈಸೂರು ಕೋಮುಗಲಭೆ ಪ್ರಕರಣ ಪ್ರತಿಧ್ವನಿಸಿದ ಕಾರಣವಾಗಿ, ರಾಜ್ಯದಲ್ಲಿ ಕೆಎಫ್‌ಡಿ, ಕೆಪಿಎಫ್ ಸಂಘಟನೆಗಳಿಗೆ ನಿಷೇಧ ಹೇರಬೇಕು. ಅಲ್ಲದೇ ಕೇಂದ್ರ ಸರ್ಕಾರ ಕೂಡ ಈ ಸಂಘಟನೆಗಳ ಮೇಲೆ ನಿಷೇಧ ಹೇರಲು ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯಿಸಿದೆ.
ವಿದ್ಯುತ್ ಕಡಿತ ಬೇಡ: ರಾಜ್ಯದಲ್ಲಿ ಮಳೆಯ ಅಭಾವದಿಂದಾಗಿ ಮುಂದಿನ ಎರಡು ತಿಂಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ 14ಗಂಟೆಗಳ ಕಾಲ ಹಾಗೂ ನಗರ ಪ್ರದೇಶದಲ್ಲಿ ಎರಡು ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದರು.
ಸಚಿವರ ಹೇಳಿಕೆ ಕಾರ್ಯಕಾರಿಣಿ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಯಾವುದೇ ಕಾರಣಕ್ಕೂ ನಗರ, ಗ್ರಾಮೀಣ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ ಮಾಡಬಾರದು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕಬಾರದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಆ ನಿಟ್ಟಿನಲ್ಲಿ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿಯಾದರೂ ವಿದ್ಯುತ್ ಅನ್ನು ಪೂರೈಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಉಪಚುನಾವಣೆ, ಕೃಷಿ, ಮೂಲಭೂತ ಸೌಕರ್ಯ, ದತ್ತ ಪೀಠ ವಿವಾದ ಸೇರಿದಂತೆ ಹಲವು ವಿಷಯಗಳು ಚರ್ಚೆಯಾದವು. ಸಚಿವ ವಿ.ಎಸ್. ಆಚಾರ್ಯ, ಸಂಸದ ಅನಂತ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಸೇರಿದಂತೆ ಪ್ರಮುಖ ಗಣ್ಯರು ಕಾರ್ಯಕಾರಿಣಿ ಸಭೆಯಲ್ಲಿ ಹಾಜರಿದ್ದರು.
ಬಿಜೆಪಿ ಅಧಿಕಾರ ಹಿಡಿಯುವ ಮುನ್ನ ರೈತರಿಗೆ 24ಗಂಟೆಗಳ ಕಾಲ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇದೀಗ ಕುಂಟು ನೆಪ ಹೇಳುವ ಮೂಲಕ ಹಣ ನೀಡಿದರೂ ವಿದ್ಯುತ್ ಕಡಿತ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ತೀವ್ರ ಟೀಕೆಗೆ ಒಳಗಾಗಿತ್ತು.