ನಗರದಲ್ಲಿ ತಮಿಳಿನ ಖ್ಯಾತ ಕವಿ ತಿರುವಳ್ಳುವರ್ ಅವರ ಪ್ರತಿಮೆ ಅನಾವರಣಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ತಿಳಿಸಿದ್ದಾರೆ.
ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಅಡ್ಡಿಪಡಿಸುತ್ತಿರುವುದು ನೋವಿನ ಸಂಗತಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕೆಂದು ಅವರು ಹೇಳಿದರು.
ಸರ್ಕಾರ ಆ.9ರಂದು ಬೆಂಗಳೂರಿನಲ್ಲಿ ಹಾಗೂ ಆ.13ರಂದು ಚೆನ್ನೈನಲ್ಲಿ ಪ್ರತಿಮೆಗಳ ಅನಾವರಣಕ್ಕೆ ತೀರ್ಮಾನಿಸಿದೆ. ಪ್ರತಿಮೆಗಳ ಸ್ಥಾಪನೆಯಿಂದ ಎರಡು ರಾಜ್ಯಗಳ ನಡುವೆ ಭಾವೈಕ್ಯತೆ ಬೆಳೆಯಲು ಸಹಕಾರಿಯಾಗುತ್ತದೆ. ಇಂತಹ ಒಳ್ಳೆಯ ಕಾರ್ಯವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ಭಾರತೀಯ ವಿದ್ಯಾಭವನ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ವಿ.ಕೃ.ಗೋಕಾಕ್ ಜನ್ಮಶತಾಬ್ದಿ ಸಮಾರಂಭದಲ್ಲಿ ಅವರು ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಭಾಷಾ ಮಾಧ್ಯಮ ಕುರಿತಂತೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೂ ಎಲ್ಲರೂ ಬೆಂಬಲ ನೀಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.