ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದಿರುವ ಗಲಭೆಯ ಹಿಂದೆ ಆಡಳಿತಾರೂಢ ಬಿಜೆಪಿಯ ಕೈವಾಡ ಇರುವುದಾಗಿ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಗಂಭೀರವಾಗಿ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ಹೇರಿದ್ದ ನಿರ್ಬಂಧಕ್ಕೆ ತಡೆ ದೊರಕಿದ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಗೆ ಪ್ರವೇಶಿಸಿದ್ದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾತಮಾರನಹಳ್ಳಿ ಗಲಭೆ ಕುರಿತಂತೆ ಸರ್ಕಾರ ನನ್ನ ವಿನಾ ಕಾರಣ ಬಂಧಿಸಿರುವುದಾಗಿ ಆಪಾದಿಸಿದರು.
ಕ್ಯಾತಮಾರನಹಳ್ಳಿಯಲ್ಲಿ ನಡೆದ ಗಲಭೆಗೂ ಶ್ರೀರಾಮಸೇನೆಗೂ ಸಂಬಂಧವೇ ಇಲ್ಲ. ಆದರೂ ನನ್ನನ್ನು ದುರುದ್ದೇಶದಿಂದ ಬಂಧಿಸುವ ಕ್ರಮಕ್ಕೆ ಬಿಜೆಪಿ ಮುಂದಾಗಿದೆ ಎಂದು ದೂರಿದರು.
ಸರ್ಕಾರ ವಿನಾ ಕಾರಣ ಶ್ರೀರಾಮಸೇನೆಯನ್ನು ತುಳಿಯುವ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಸರ್ಕಾರದ ವಿರುದ್ದ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಅಲ್ಲದೇ ಫ್ರೆಂಡ್‌ಶಿಪ್ ಡೇ ಆಚರಣೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದರು. ಇದರ ವಿರುದ್ಧ ಕಾರ್ಯಾಚರಣೆ ನಡೆಸುವ ಗುಟ್ಟು ಬಿಟ್ಟು ಕೊಡದ ಅವರು, ಗೆಳೆತನ ಎನ್ನುವಂಥದ್ದು ನಿರಂತರವಾದದ್ದು, ಯಾವುದೋ ಒಂದು ದಿನ ಬಂದು ಹೋಗುವುದಲ್ಲ, ಆದ್ದರಿಂದ ಈ ಆಚರಣೆಯನ್ನು ವಿರೋಧಿಸುವುದಾಗಿ ತಿಳಿಸಿದರು.
ಈ ದಿನಾಚರಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಮುಂದೆ ಕಾನೂನು ಚೌಕಟ್ಟಿನೊಳಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.