ವಿದ್ಯುತ್ ಕೊರತೆ ಮತ್ತು ಲೋಡ್ ಶೆಡ್ಡಿಂಗ್ ಜಾರಿ ಕುರಿತು ಇಂಧನ ಸಚಿವ ಈಶ್ವರಪ್ಪ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಕುರಿತು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ವಿದ್ಯುತ್ ಲಭ್ಯತೆಯ ಬಗ್ಗೆ ಮಾತ್ರ ಅವರು ವಿವರ ನೀಡಬೇಕಿತ್ತು. ಕೊರತೆಯನ್ನು ನೀಗಲು ಕೈಗೊಳ್ಳಲು ಕ್ರಮಗಳ ಕುರಿತು ಜನತೆಗೆ ಭರವಸೆ ನೀಡಬೇಕಿತ್ತು. ಆದರೆ ಸಚಿವರು ಏಕಾಏಕಿ ಲೋಡ್‌ಶೆಡ್ಡಿಂಗ್ ವೇಳಾಪಟ್ಟಿ ಪ್ರಕಟಿಸುವ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂಬುದಾಗಿ ಕೆಲವರು ಸಭೆಯಲ್ಲೇ ಆರೋಪ ಮಾಡಿದರು ಎಂದು ತಿಳಿದು ಬಂದಿದೆ.
ಸಚಿವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿದೆ. ರಾಜ್ಯ ಸರ್ಕಾರ ವಿದ್ಯುತ್ ಖರೀದಿಸುವುದಿಲ್ಲ ಎಂದು ಈವರೆಗೆ ಎಲ್ಲಿಯೂ ಹೇಳಿಲ್ಲ. ಸಮಸ್ಯೆ ಪರಿಹಾರ ಕಂಡುಕೊಳ್ಳಲು ಯಾವುದೇ ಕ್ರಮ ಕೈಗೊಳ್ಳಲೂ ಸಿದ್ದವಿರಬೇಕು ಎನ್ನುವ ಅಭಿಪ್ರಾಯ ಕಾರ್ಯಕಾರಿಣಿಯಲ್ಲಿ ಮೂಡಿಬಂದಿದೆ ಎಂದು ಪಕ್ಷದ ವಕ್ತಾರ ವಿ.ಧನಂಜಯ್ ಕುಮಾರ್ ಅವರೂ ತಿಳಿಸಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಸಚಿವ ಈಶ್ವರಪ್ಪ ಲೋಡ್‌ಶೆಡ್ಡಿಂಗ್ ಘೋಷಣೆಯ ಅನಿವಾರ್ಯತೆ ಕುರಿತು ಕಾರ್ಯಕಾರಿಣಿಗೆ ಸಮಜಾಯಿಷಿ ನೀಡಿದ್ದಾರೆ. ಸರ್ಕಾರದ ಭಾಗವಾಗಿ ತಾವು ಈ ಕ್ರಮ ಕೈಗೊಳ್ಳಲೇಬೇಕಿತ್ತು ಎಂಬುದನ್ನು ಅವರು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.