ಬೆಂಗಳೂರು ಗೋವಿಂದರಾಜ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗಲು ತಾಂತ್ರಿಕದೋಷ ಕಾರಣವೇ ಹೊರತು ಉದ್ದೇಶ ಪೂರ್ವಕವಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್ ತಟಸ್ಥವಾಗಿರುತ್ತದೆ. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕೊಳ್ಳೇಗಾಲ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಪರ ಸಂತೇಮರಹಳ್ಳಿ ಹೋಬಳಿಯಲ್ಲಿ ಭಾನುವಾರ ರೋಡ್ ಶೋ ನಡೆಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗೋವಿಂದರಾಜ ನಗರ ಕ್ಷೇತ್ರದಲ್ಲಿ ಜೆಡಿಎಸ್ ಕಣದಿಂದ ದೂರವಾಗಲು ಯುವ ಅಭ್ಯರ್ಥಿಗೆ ಅನುಭವದ ಕೊರತೆ ಕಾರಣ. ಕಾಂಗ್ರೆಸ್‌ಗೆ ಸಹಾಯ ಮಾಡುವ ಉದ್ದೇಶದಿಂದಲೇ ನಾಮಪತ್ರದಲ್ಲಿ ದೋಷ ಮಾಡಲಾಗಿತ್ತು ಎನ್ನುವುದು ಸುಳ್ಳು ಎಂದ ಅವರು, ಆ ಕ್ಷೇತ್ರದಲ್ಲಿ ಬಿಜೆಪಿ ಮಾಡುತ್ತಿರುವ ಅಬ್ಬರ ನೋಡಿದರೆ ಅಲ್ಲಿ ಪೈಪೋಟಿ ನಡೆಸುವಷ್ಟು ಆರ್ಥಿಕ ಚೈತನ್ಯ ಜೆಡಿಎಸ್‌ಗೆ ಇಲ್ಲ ಎಂದರು.
ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ಜನರು ಜೆಡಿಎಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇಲ್ಲಿ ಬೇರೆ ಪಕ್ಷಗಳ ಯಾವುದೇ ತಂತ್ರಗಾರಿಕೆ ನಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.