ಪದ್ಮಪ್ರಿಯ ಜತೆ ಅನೈತಿಕ ಸಂಬಂಧ ಇತ್ತು: ಅತುಲ್
ಸಿಓಡಿಗೆ ನೀಡಿರುವ ಸ್ವಯಂ ಹೇಳಿಕೆಯಲ್ಲಿ ಬಹಿರಂಗ
ಉಡುಪಿ, ಸೋಮವಾರ, 3 ಆಗಸ್ಟ್ 2009( 11:27 IST )
ರಾಜ್ಯಾದ್ಯಂತ ವಿವಾದ ಹುಟ್ಟುಹಾಕಿದ್ದ ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅತುಲ್ ರಾವ್, ತಮಗೆ ಆಕೆಯೊಂದಿಗೆ ಸಂಬಂಧ ಇತ್ತು ಎನ್ನುವುದನ್ನು ಸಿಓಡಿಗೆ ನೀಡಿರುವ ಸ್ವಇಚ್ಛಾ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.
ಆ ಹಿನ್ನೆಲೆಯಲ್ಲಿ ಆರೋಪಿ ಅತುಲ್ ಶಿಕ್ಷಾರ್ಹ ಅಪರಾಧ ಎಸಗಿದ್ದು ಕೂಡಲೇ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ರಘುಪತಿ ತಮ್ಮ ವಕೀಲ ಪ್ರದೀಪ್ ಕುಮಾರ್ ಮೂಲಕ ಉಡುಪಿಯ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಪ್ರಧಾನ ನ್ಯಾಯಿಕ ದಂಡಾಧಿಕಾರಿಗಳಿಗೆ ಖಾಸಗಿ ದೂರು ಸಲ್ಲಿಸಿದ್ದಾರೆ.
ಪದ್ಮಪ್ರಿಯ ಅವರೊಂದಿಗೆ ತಮಗೆ ಅನೈತಿಕ ಸಂಬಂಧ ಇತ್ತು ಎನ್ನುವುದನ್ನು ಅತುಲ್ ಒಪ್ಪಿಕೊಂಡಿದ್ದು, ತಾವು ಅಡಿಕೆ ಮಾರುವ ಸಲುವಾಗಿ ಕಾರ್ಕಳಕ್ಕೆ ಹೋಗಿ ಬರುತ್ತಿದ್ದೆ. ಆಗ ಅಲ್ಲಿನ ಪ್ರಶಾಂತ್ ಲಾಡ್ಜ್‌ನಲ್ಲಿ ಪದ್ಮಪ್ರಿಯ ಅವರೊಂದಿಗೆ 5-6ಬಾರಿ ಉಳಿದುಕೊಂಡಿರುವುದಾಗಿ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.
ಈ ಕುರಿತು ಭಟ್ ಸಿಓಡಿ ತನಿಖೆಯ ವರದಿಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿದ್ದು, ಅದರಲ್ಲಿ ಆರೋಪಿ ಅತುಲ್ ರಾವ್ ನೀಡಿರುವ ಸ್ವಯಂ ಹೇಳಿಕೆಯಗಳನ್ನು ಆಧರಿಸಿ ತಮ್ಮ ಪತ್ನಿಯೊಂದಿಗೆ ಆತ ಅನೈತಿಕ ಸಂಬಂಧ ಹೊಂದಿರುವುದನ್ನು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.