ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ವಿಶ್ರಾಂತಿಗಾಗಿ ಕರ್ನಾಟಕಕ್ಕೆ ಆಗಮಿಸಿರುವ ಅವರು ಕನಕಪುರ ತಾಲೂಕು ಹಾರೋಹಳ್ಳಿ ಹೋಬಳಿಯ ವಡೇರಹೋಬಳಿಯಲ್ಲಿ ಇರುವ ತಮ್ಮ ಪುತ್ರಿ ಸೆಲ್ವಿ ಫಾರ್ಮ್‌ಹೌಸ್‌ನಲ್ಲಿ ತಂಗಿದ್ದಾರೆ.
ವಿಮಾನ ನಿಲ್ದಾಣದಿಂದ ಫಾರ್ಮ್ ಹೌಸ್‌ಗೆ ಬಿಗಿ ಭದ್ರತೆಯಲ್ಲಿ ಕರುಣಾನಿಧಿ ಅವರನ್ನು ಕರೆದೊಯ್ಯಲಾಯಿತು. ಫಾರ್ಮ್‌ಹೌಸ್ ಆವರಣದಲ್ಲಿ ವಿಶೇಷ ಭದ್ರತೆ ಕಲ್ಪಿಸಿದ್ದು, ರಾಜ್ಯ ಹಾಗೂ ತಮಿಳುನಾಡಿನ ಪೊಲೀಸರು ಬೀಡುಬಿಟ್ಟಿದ್ದಾರೆ. ಕರುಣಾನಿಧಿ ಆ.9ರವರೆಗೆ ವಾಸ್ತವ್ಯ ಹೂಡಲಿದ್ದಾರೆ.
ಪ್ರತಿಭಟನೆ ಬಿಸಿ: ವಿಶ್ರಾಂತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕರುಣಾನಿಧಿ ಅವರು ರಾಜ್ಯಕ್ಕೆ ಆಗಮಿಸಿದ ವೇಳೆ, ದೇವನಹಳ್ಳಿ ಸಾದಹಳ್ಳಿಗೇಟ್ ಬಳಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರ ಗುಂಪನ್ನು ಪೊಲೀಸರು ಚದುರಿಸಲು ಮುಂದಾದಾಗ ಇಬ್ಬರು ಕಾರ್ಯಕರ್ತರಿಗೆ ಸಣ್ಣ-ಪುಟ್ಟ ಗಾಯಗಳಾಗಿತ್ತು.