ನಗರದ ಇಂದಿರಾನಗರದಲ್ಲಿರುವ ಸಿಎಂಎಚ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿದ್ದ ಮೆಟ್ರೊ ಕಾಮಗಾರಿಯ ಕಾಂಕ್ರೀಟ್ ಹಂತದಲ್ಲಿ ಪಿಲ್ಲರ್‌ವೊಂದು ಸೋಮವಾರ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಮೆಟ್ರೊ ಪಿಲ್ಲರ್ ದಿಢೀರನೆ ಬಾಗಿ ಕೆಳಗೆ ಬಿದ್ದಿತು. ಕಾರ್ಯನಿರ್ವಹಿಸುತ್ತಿದ್ದ ಯಾರಿಗೂ ಪ್ರಾಣಾಪಾಯ ಆಗಿಲ್ಲವಾದರೂ, ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಳಗೆ ಬಿದ್ದಿರುವ ಪಿಲ್ಲರ್ ಅನ್ನು ಮೇಲೆತ್ತಲು ಕ್ರೇನ್ ಅನ್ನು ತರಿಸಲಾಗಿದ್ದು, ಕಾರ್ಯಾಚರಣೆ ನಡೆಸಲಾಗಿದೆ. ನೆಲಕ್ಕೆ ಬಾಗಿಕೊಂಡಿರುವ ಪಿಲ್ಲರ್ ಅನ್ನು ನೋಡಲು ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸುತ್ತಲೇ ಇದ್ದಾರೆ.
ಮೆಟ್ರೊ ಪಿಲ್ಲರ್ ಕೆಳಗೆ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ, ಮೆಟ್ರೊ ಹಿರಿಯ ಅಧಿಕಾರಿಗಳು ಹಾಗೂ ಇಂದಿರಾನಗರದ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೊ ಗುಣಮಟ್ಟ ರಹಿತ ಕಾಮಗಾರಿಯಿಂದಾಗಿ ಎರಡು ಬಾರಿ ಅಲ್ಲಿನ ಮೇಲು ಸೇತುವೆ ಕುಸಿದು ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.