ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಕಂಡ ಅತೀ ದೊಡ್ಡ ಸುಳ್ಳುಗಾರ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕಾವೇರಿಪುರದಲ್ಲಿ ಮತಯಾಚನೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಬಿಜೆಪಿ ಹಾಗೂ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.
ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸೋಮಣ್ಣ ಬಂದು ನಿಮ್ಮೆದುರು ನಾಟಕವಾಡ್ತಾರೆ, ಕಾಲು ಹಿಡಿತಾರೆ,ನಂಬಬೇಡಿ. ಮತದಾರರ ವಿಶ್ವಾಸ ಕಳೆದುಕೊಂಡಿರುವ ಸೋಮಣ್ಣ ಅವರನ್ನು ಸೋಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ರಾಜಕೀಯದಲ್ಲಿ ಅಳುವವರನ್ನು ನಂಬಬೇಡಿ. ಬಿಜೆಪಿ ಮೇಲೆ ನೋಡಲು ಮಾತ್ರ ಚೆನ್ನಾಗಿದೆ. ಒಳಗೆ ಕೊಳಕು ವಾಸನೆ. ಕೇಂದ್ರ ಸರ್ಕಾರವು ನರ್ಮ್ ಮತ್ತಿತ್ಯಾದಿ ಯೋಜನೆಗಳ ಮೂಲಕ ಸಾವಿರಾರು ಕೋಟಿ ರೂಪಾಯಿ ನೀಡುತ್ತಿದೆ. ಇದೊಂಥರಾ ಕೇಂದ್ರದ ದುಡ್ಡು, ಬಿಜೆಪಿ ಜಾತ್ರೆ ಎಂದು ಸಿದ್ದರಾಮಯ್ಯ ತಿಳಿಸಿದರು.
14ಸಾವಿರ ಕೋಟಿ ರೂಪಾಯಿ ಇದ್ದ ರಾಜ್ಯದ ಸಾಲವನ್ನು ಮೂರು ವರ್ಷದಲ್ಲಿ ಯಡಿಯೂರಪ್ಪ 74ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಿದ್ದಾರೆ. ಈ ಮೂಲಕ ನಮ್ಮನ್ನೆಲ್ಲಾ ಅವರು ಬಡ್ಡಿ ಕಟ್ಟುವ ಮಕ್ಕಳಾಗಿಸಿದ್ದಾರೆ ಎಂದು ಲೇವಡಿ ಮಾಡಿದರು.