ಬಂಡಾಯ, ಭಿನ್ನಮತ ಪ್ರದರ್ಶಿಸುವ ಪಕ್ಷದ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಎಂ.ಪಿ.ರೇಣುಕಾಚಾರ್ಯ ಅವರಿಗೆ ಬಿಜೆಪಿ ಸೋಮವಾರ ಷೋಕಾಸ್ ನೋಟಿಸ್ ನೀಡಿದೆ.
ಪಕ್ಷದಲ್ಲಿನ ಅಶಿಸ್ತು ಸಹಿಸಿಲ್ಲ ಎಂಬ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಫರ್ಮಾನಿನ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಿರುವುದು ಕುತೂಹಲ ಕೆರಳಿಸಿದೆ. ನೋಟಿಸ್‌ಗೆ ಏಳು ದಿನಗಳೊಳಗಾಗಿ ವಿವರಣೆ ನೀಡದೇ ಇದ್ದಲ್ಲಿ ತಮ್ಮನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂಬ ಎಚ್ಚರಿಕೆಯನ್ನೂ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಸರ್ಕಾರದ ಅಭದ್ರತೆಗೆ ಅವಕಾಶ ಕೊಡಬೇಡಿ ಎಂಬ ರಾಜನಾಥ್ ಅವರ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದ ಹಿರಿಯ ನಾಯಕರು ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.
ಈ ನೋಟಿಸ್ ಎಂಬ ಅಸ್ತ್ರವನ್ನು ಸದ್ಯಕ್ಕೆ ರೇಣುಕಾಚಾರ್ಯ ಅವರೊಬ್ಬರ ಮೇಲೆ ಪ್ರಯೋಗಿಸಲಾಗಿದ್ದರೂ, ಅದರ ಪ್ರಭಾವ ಇತರ ಭಿನ್ನಮತೀಯ ನಾಯಕರಿಗೂ ತಗಲುತ್ತದೆ ಎಂಬ ವಿಶ್ವಾಸ ಬಿಜೆಪಿ ನಾಯಕರದ್ದು.