ಗಣಿಧಣಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಚುನಾವಣಾ ಆಯೋಗ ಬಳ್ಳಾರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೋಮವಾರ ತಕರಾರು ಅರ್ಜಿ ಸಲ್ಲಿಸಿದೆ. ಪ್ರಕರಣದ ವಿಚಾರಣೆ 14ರಂದು ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ ಆಯೋಗದ ಪರ ಪ್ರತ್ಯೇಕವಾಗಿ ವಾದ ಮಂಡಿಸಲು ವಕೀಲ ಶೇಕ್ ಶಫಿ ಅವರನ್ನು ನೇಮಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಎಸ್.ಸುರಂಜನ್ ಗುಲ್ಬರ್ಗದಲ್ಲಿ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಪರ ನ್ಯಾಯವಾದಿ ಶೇಕ್ ಶಫಿ ತರಕಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರಾದ ಸರ್ವಮಂಗಳಾ, ಆ.14ಕ್ಕೆ ವಿಚಾರಣೆ ನಿಗದಿಗೊಳಿಸಿದ್ದಾರೆ. ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಮೊಕದ್ದಮೆ ಹಿಂಪಡೆಯುವ ಕುರಿತು ರಾಜ್ಯ ಸರ್ಕಾರ ಒಂದು ತಿಂಗಳ ಮೊದಲೇ ನಿರ್ಧರಿಸಿದ್ದು, ಚುನಾವಣಾ ಆಯೋಗ ಕೊನೇ ಕ್ಷಣದಲ್ಲಿ ಆಕ್ಷೇಪ ಸಲ್ಲಿಸುವುದು ಸರಿಯಲ್ಲ ಎಂದು ವಾದ ಮಂಡಿಸಿದರು.
ಈ ನಡುವೆ, ಬೋಫೋರ್ಸ್ ಹಗರಣದಿಂದ ಕ್ವಟ್ರೋಚಿಯನ್ನೇ ಆರೋಪ ಮುಕ್ತಗೊಳಿಸಿರುವಾಗ ತಮ್ಮ ಪ್ರಕರಣವನ್ನು ಸರ್ಕಾರ ಕೈಬಿಟ್ಟಿರುವುದು ದೊಡ್ಡ ವಿಷಯವಲ್ಲ ಎಂದು ಜನಾರ್ದನ ರೆಡ್ಡಿ ಗದುಗಿನಲ್ಲಿ ಪ್ರತಿಕ್ರಿಯಿಸಿದ್ದಾರೆ.