ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ: ಸಿಎಂಗೆ ರೇವಣ್ಣ ಸವಾಲ್
ಬೆಂಗಳೂರು, ಮಂಗಳವಾರ, 4 ಆಗಸ್ಟ್ 2009( 12:56 IST )
NRB
ರಾಜ್ಯವನ್ನು ಸಂಪೂರ್ಣ ದಿವಾಳಿ ಅಂಚಿಗೆ ತಂದಿರುವ ಕೀರ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಬೇಕು ಎಂದಿರುವ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ, ಲೋಕೋಪಯೋಗಿ ಇಲಾಖೆಯೊಂದರಲ್ಲೇ 800ಕೋಟಿ ರೂ.ಬಿಲ್ ಬಾಕಿ ಇದೆ. ಇದು ಇಲ್ಲ ಎಂದು ದೃಢಪಡಿಸಿದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಸವಾಲೆಸೆದಿದ್ದಾರೆ.
ರಾಜ್ಯದ ಬೊಕ್ಕಸ ಖಾಲಿಯಾಗಿದೆ, ಆದರೆ ಇದನ್ನು ಸರ್ಕಾರ ಒಪ್ಪಲು ತಯಾರಿಲ್ಲ. ಸರ್ಕಾರದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಈ ಕುರಿತು ಚರ್ಚೆಗೆ ಸಿಎಂ ಆಹ್ವಾನಿಸಿದ್ದಾರೆ. ಅವರ ಪಂಥಾಹ್ವಾನವನ್ನು ತಾನು ಸ್ವೀಕರಿಸಿರುವುದಾಗಿ ಹೇಳಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ನೂರಾರು ಕೋಟಿ ರೂಪಾಯಿ ಬಿಲ್‌ಗಳು ಬಾಕಿ ಇದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟ ಬಗ್ಗೆ ಯಾವ ಇಲಾಖೆಗಳ ಹಣ ಬಾಕಿಯಿದೆ. ಕೇಂದ್ರದಿಂದ ಎಷ್ಟು ಹಣ ಬಂದಿದೆ ಎಂಬ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.
ರಾಜ್ಯ ಐದು ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.