ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ವಿರೋಧಿಸಿರುವ ಕನ್ನಡ ಚಳವಳಿಯ ವಾಟಾಳ್ ನಾಗರಾಜ್, ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ದ ಎಂದಿರುವ ಅವರು ಪ್ರತಿಮೆ ಅನಾವರಣ ಮಾಡುವ ದಿನ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ.
ತಮಿಳುನಾಡಿನ ಕವಿಯಾಗಿರುವ ತಿರುವಳ್ಳುವರ್ ಪ್ರತಿಮೆಯನ್ನು ರಾಜ್ಯದಲ್ಲಿ ಅನಾವರಣ ಮಾಡಲು ಬಿಡುವುದಿಲ್ಲ. ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮೂಲಕ ತಮಿಳು ಸಾಮ್ರಾಜ್ಯಕ್ಕೆ ಅವಕಾಶ ನೀಡುವುದಿಲ್ಲ. ರಾಜ್ ಅಪಹರಣದ ವೇಳೆ ವೀರಪ್ಪನ್ ಈ ಬೇಡಿಕೆ ಇಟ್ಟಿದ್ದ. ಇದರಿಂದ ರಾಜ್ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಮಹತ್ವ ನೀಡಿದ ಸರ್ಕಾರ ಇದೀಗ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸುವ ಮೂಲಕ ಅವಮಾನ ಮಾಡಿದೆ ಎಂದು ದೂರಿದ್ದಾರೆ. ತಮಿಳು ಮತಗಳ ಆಸೆಗಾಗಿ ರಾಜ್ಯವನ್ನು ಮಾರಾಟಕ್ಕೆ ಇಟ್ಟಿರುವ ಸರ್ಕಾರದ ನಿಲುವು ಅತ್ಯಂತ ಖಂಡನೀಯ ಎಂದು ಹೇಳಿದರು.
ಇದೇ ವೇಳೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದರ ವಿರುದ್ಧ ಚೆನ್ನೈ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ತಮಿಳುನಾಡು ಸರ್ಕಾರವು ಹಿಂತೆಗೆಸಬೇಕು ಎಂದು ಆಗ್ರಹಿಸಿದ್ದಾರೆ.