ಮುಖ್ಯಮಂತ್ರಿ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮಿಬ್ಬರ ಮಧ್ಯೆ ಕಂದಕ ನಿರ್ಮಿಸುವ ವ್ಯವಸ್ಥಿತ ಸಂಚು ಪ್ರತಿಪಕ್ಷದಿಂದ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಬೆಂಬಲಿಗ ಶಾಸಕರ ಸಹಿ ಸಂಗ್ರಹಿಸುತ್ತಿರುವ ಬಗ್ಗೆ ಪ್ರತಿಪಕ್ಷಗಳು ಆರೋಪಗಳು ಸತ್ಯಕ್ಕೆ ದೂರವಾಗಿದೆ. ಇದು ಪ್ರತಿಪಕ್ಷಗಳು ರಾಜ್ಯ ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳನ್ನು ಕಂಡು ಸಹಿಸಲಾಗದೆ ಹಬ್ಬಿಸಿರುವ ಗುಲ್ಲು. ಪ್ರತಿಪಕ್ಷಗಳ ನಾಯಕರು ಈ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ನಮಗೆಲ್ಲಾ ಪ್ರಶ್ನಾತೀತಿ ನಾಯಕರಾಗಿದ್ದಾರೆ ಎಂದು ತಿಳಿಸಿದ ಅವರು, ಪ್ರತಿಪಕ್ಷದ ಮಾತನ್ನು ನಂಬಬೇಡಿ. ರಾಜ್ಯ ಸರ್ಕಾರದ ಅಭಿವೃದ್ಧಿ ಸಹಿಸದ ಅವರುಗಳು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವರದಿ ಮಾಡಬೇಕು ಎಂದು ಮಾಧ್ಯಮಕ್ಕೆ ಸಲಹೆ ಮಾಡಿದರು.
ಇದೇ ವೇಳೆ ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಕುರಿತು ಮಾತನಾಡಿದ ಅವರು, 3 ತಿಂಗಳ ಬಳಿಕ ಅವರು ಬದಲಾಗುತ್ತಾರೋ ಇಲ್ಲವೋ ಎಂಬುದನ್ನು ಕಾಲವೇ ನಿರ್ಣಯಿಸಲಿದೆ. ಆದರೆ ಪ್ರಸ್ತುತ ಅವರ ಅಧ್ಯಕ್ಷತೆಯಲ್ಲಿ ಕೆಎಂಎಫ್‌ನಲ್ಲಿ ಮಹತ್ವದ ಬದಲಾವಣೆಯಾಗುವುದು ನಿಶ್ಚಿತ ಎಂದು ಭರವಸೆ ನೀಡಿದ್ದಾರೆ.