ರಾಜ್ಯದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸುವುದು ಖಚಿತ ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಮ್ಮೆ ತಳೆದ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಮಂಗಳವಾರ 13ಜಿಲ್ಲೆಗಳ ತಮಿಳು ಸಂಘಟನೆ ಒಕ್ಕೂಟದೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಈ ಕಾರ್ಯಕ್ರಮಕ್ಕೆ ತಮಿಳರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಲ್ಲದೇ ನೆಲ, ಜಲ, ಭಾಷೆ ವಿಚಾರದಲ್ಲಿ ಒಗ್ಗಟ್ಟಾಗಿ ದುಡಿಯೋಣ ಎಂದು ಹೇಳಿದರು.
ತಿರುವಳ್ಳುವರ್ ಮತ್ತು ಸರ್ವಜ್ಞ ಪ್ರತಿಮೆ ಅನಾವರಣ ವಿವಾದವನ್ನು ಯಾವುದೇ ಸರ್ಕಾರಕ್ಕೂ ಬಗೆ ಹರಿಸಲು ಆಗಿರಲಿಲ್ಲವಾಗಿತ್ತು. ಇದೀಗ ಆಡಳಿತಾರೂಢ ಬಿಜೆಪಿ ಸರ್ಕಾರ ಸೌಹಾರ್ದತೆಯೊಂದಿಗೆ ವಿವಾದಕ್ಕೆ ತೆರೆ ಎಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಆಗೋಸ್ಟ್ 9ರಂದು ಉದ್ಯಾನನಗರಿಯಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ನಿರ್ಧರಿಸಲಾಗಿದೆ. ಅದರಂತೆ ಕಾರ್ಯಕ್ರಮ ಸುಗಮವಾಗಿ ನಡೆಯಲಿದ್ದು, ಪೂರ್ವಭಾವಿಯಾಗಿ ಭದ್ರತೆ ಸೇರಿದಂತೆ ಮತ್ತಿತರ ಮುನ್ನೆಚ್ಚರಿಕೆ ವಿಷಯಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದರು.