ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯದಂದು ಹೆಂಡತಿಯರಿಂದ ಪೀಡನೆಗೆ ಒಳಗಾಗಿರುವ ಗಂಡಂದಿರ ಗುಂಪೊಂದು ಸಿಮ್ಮಾದಲ್ಲಿ ಮಾತುಕತೆ ನಡೆಸಿ, ತಮಗೂ ಸಮಾನ ಹಕ್ಕು ಮತ್ತು ಸ್ವಾತಂತ್ರ್ಯ ಬೇಕು ಎಂಬ ಬೇಡಿಕೆಯನ್ನ ಮುಂದಿಡುವಮುಂದಾಗಿರುವ ಕುತೂಹಲಕಾರಿ ಅಂಶವೊಂದು ವರದಿಯಾಗಿದೆ.
ಸ್ವಾತಂತ್ರ್ಯ ದಿನಾಚರಣೆಯಂದೇ ನಾವು ನಮಗೂ ಸ್ವಾತಂತ್ರ್ಯ ಬೇಕು ಎಂಬುದರ ಬಗ್ಗೆ ಧ್ವನಿ ಎತ್ತುವುದಾಗಿ ಪೀಡಿತ ಪತಿಯಂದಿರ ಬೇಡಿಕೆಯಾಗಿದೆ! ಆ ಹಿನ್ನೆಲೆಯಲ್ಲಿ ದೇಶಾದ್ಯಂತದಿಂದ 30ಸಾವಿರ ಪೀಡಿತ ಗಂಡಂದಿರು ಹಾಗೂ ನೂರು ಮಂದಿ ನೇತೃತ್ವದಲ್ಲಿ ಇಡೀ ದಿನ ಸಭೆ ನಡೆಸುವುದಾಗಿ ಸೇವ್ ಇಂಡಿಯನ್ ಫೆಮಿಲಿ ಫೌಂಡೇಶನ್(ಎಸ್‌ಐಎಫ್‌ಎಫ್) ಅಧ್ಯಕ್ಷ ಅನಿಲ್ ಕುಮಾರ್ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಬೆಂಗಳೂರು ಮೂಲದ ಎನ್‌ಜಿಒ ಎಸ್‌ಐಎಫ್‌ಎಫ್, ಮತ್ತೊಂದು ಸಂಸ್ಥೆಯಾದ ಸಿಆರ್‌ಐಎಸ್‌ಪಿ, ಮಹಾರಾಷ್ಟ್ರದ ಪುರುಷ್ ಸುರಕ್ಷಾ ಸಂಸ್ಥಾ ಹಾಗೂ ಉತ್ತರ ಪ್ರದೇಶದ ಪತಿ ಪರಮೇಶ್ ಕೇಂದ್ರ ಸಂಘಟನೆಗಳು ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಭಾರತದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳು ದೊರೆಯಬೇಕು ಎಂಬುದು ಈ ನಾಲ್ಕು ಸಂಘಟನೆಗಳ ಒತ್ತಾಯವಾಗಿದೆ.
ಗಂಡಂದಿರ ವಿಷಯದಲ್ಲಿ ಭಾರತೀಯ ಕಾನೂನು ವ್ಯವಸ್ಥೆ ತಾರತಮ್ಯದಿಂದ ಕೂಡಿದ್ದು, ಅವೆಲ್ಲ ಹೆಂಡತಿಯರಿಗೆ ಬಹಳಷ್ಟು ಅನುಕೂಲಕರವಾಗಿದೆ ಎಂಬುದನ್ನು ಹಲವಾರು ಘಟನೆಗಳಿಂದ ನಾವು ಗಮನಿಸಿದ್ದೇವೆ. ವಿಚ್ಛೇದಿತ ದಂಪತಿಗಳ ಮಕ್ಕಳ ಪೋಷಣೆ, ಡೊಮೆಸ್ಟಿಕ್ ವಯಲೆನ್ಸ್ ಹಾಗೂ ವರದಕ್ಷಿಣೆ ಪೀಡನೆ ಇವೆಲ್ಲವೂ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರ ಪರವಾಗಿಯೇ ಇದೆ. ಅದೂ ಪುರುಷರ ಯಾವ ಕೂಗಿಗೂ ಬೆಲೆ ಇಲ್ಲದಂತಾಗಿದೆ ಎಂಬುದು ಕುಮಾರ್ ಆರೋಪ.
ಏನೇ ಇರಲಿ, ಇಷ್ಟೆಲ್ಲಾ ಆರೋಪ ಹೇಳುವ ನಾವು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇವೆ. ನಾವು ನಿಜಕ್ಕೂ ಮಹಿಳಾ ದ್ವೇಷಿಗಳಲ್ಲ. ಇದು ಕೇವಲ ಪುರುಷ ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳು ಬೇಕು ಎಂಬುದು ಮಾತ್ರ ಎಂಬ ವಿವರಣೆ ಸಿಆರ್‌ಐಎಸ್‌ಪಿಯ ಕುಮಾರ್ ಜಾಗೀರ್‌ದಾರ್ ವಿವರಣೆ.
ಪತ್ನಿಯಂದಿರಿಂದ ಪೀಡನೆ ಒಳಗಾಗುತ್ತಿರುವ ಬಗ್ಗೆ ನಡೆಸಿದ ತನಿಖೆಯಿಂದ ಸತ್ಯಾಂಶ ಬಯಲಾಗಿದೆ. ಪತ್ನಿಯಂದಿರ ಪೀಡನೆಯಿಂದ ದೇಶಾದ್ಯಂತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಗಂಡಂದಿರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಕುಮಾರ್ ಆತಂಕ ವ್ಯಕ್ತಪಡಿಸಿದರು. ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿ ಪೀಡನೆಗೆ ಒಳಗಾಗಿರುವ ಸುಮಾರು 1.2ಲಕ್ಷ ಗಂಡಂದಿರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎಸ್‌ಐಎಫ್‌ಎಫ್ ಅಧ್ಯಕ್ಷರು ವಿವರಿಸಿದರು.
ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೋದಿಂದ ಎಸ್‌ಐಎಫ್‌ಎಫ್ ಆತ್ಮಹತ್ಯೆಯ ಅಂಕಿ-ಅಂಶವನ್ನು ಸಂಗ್ರಹಿಸಿರುವುದಾಗಿ ಹೇಳಿದೆ. ಇದು ಕೇವಲ ಎಚ್ಚರಿಕೆಯ ಅಂಕಿ-ಅಂಶವಾಗಿದೆ. ಹಾಗಾಗಿಯೇ ನಮ್ಮ ಹೋರಾಟ ಏನಿದ್ದರೂ ಇಂತಹ ಪೀಡಕ ಪತ್ನಿಯಂದಿರ ಮತ್ತು ಪೀಡನೆಗೊಳಗಾಗಿರುವ ಪತಿಯಂದಿರ ಪರವಾದದ್ದು ಎಂದು ಹೇಳಿದರು.
ಪುರುಷ-ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕು ಎಂಬ ಬೇಡಿಕೆಯೊಂದಿಗೆ ಸಿಮ್ಲಾದಲ್ಲಿ ನಡೆಯುವ ಸಭೆಯಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಇದ್ದಂತೆ ಪ್ರತ್ಯೇಕವಾಗಿ ಪುರುಷ ಕಲ್ಯಾಣ ಸಚಿವಾಲಯ ಬೇಕೆಂಬ ಬೇಡಿಕೆಯ ಬಗ್ಗೆಯೂ ಧ್ವನಿ ಎತ್ತುವುದಾಗಿ ಗಂಡಂದಿರ ಸಂಘಟನೆ ನಿರ್ಧರಿಸಿದೆಯಂತೆ.
ಎಸ್‌ಐಎಫ್‌ಎಫ್ ಮತ್ತು ಸಿಆರ್‌ಐಎಸ್‌ಎಫ್ ಅಂಕಿ-ಅಂಶದಂತೆ, ದೆಹಲಿ ಮತ್ತು ಬೆಂಗಳೂರು ನಗರಗಳಲ್ಲಿ ಪ್ರತಿದಿನ 20-25 ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿದೆ. 2008ರ ಸಾಲಿನಲ್ಲಿಯೇ ದೆಹಲಿಯಲ್ಲಿ 9 ಸಾವಿರ, ಮುಂಬೈಯಲ್ಲಿ 7,500 ಮತ್ತು ಬೆಂಗಳೂರಿನಲ್ಲಿ 5ಸಾವಿರ ವಿಚ್ಛೇದನ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದೆ. ಅಂತೂ ಪತ್ನಿ ಪೀಡನೆಗೆ ಒಳಗಾಗಿರುವ ಗಂಡಂದಿರು ಯಾರಿಗೆ ಬಂತು...ಎಲ್ಲಿಗೆ ಬಂತು....ಸ್ವಾತಂತ್ರ್ಯ ಎಂಬ ಕವಿವರ್ಯರ ಹಾಡನ್ನು ಕೋರಸ್‌ನಲ್ಲಿ ಹಾಡಲು ತೊಡಗಿದ್ದಾರಂತೆ!