ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಜನರು ಸರ್ಕಾರದ ಕಾರ್ಯವೈಖರಿಯನ್ನು ನೋಡಿದ್ದಾರೆ. ಬಿಜೆಪಿಯ ಜನವಿರೋಧಿ ತನ ಕಂಡಿದ್ದಾರೆ. ಮತದಾರರು ಸರ್ಕಾರದ ವಿರುದ್ಧ ಮತಚಲಾವಣೆ ಮಾಡಲಿದ್ದಾರೆ ಎಂದು ಸಿದ್ದರಾಮಯ್ಯ ಅವರು ಕೊಳ್ಳೇಗಾಲ ಕ್ಷೇತ್ರ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಬಹಿರಂಗ ಪ್ರಚಾರ ಸಭೆಗೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಬಿಜೆಪಿ ಸರ್ಕಾರ ಖಜಾನೆಯನ್ನು ಖಾಲಿ ಮಾಡಿದೆ ಎಂಬ ಹೇಳಿಕೆಯನ್ನು ಸುಳ್ಳು ಎಂದು ಹೇಳುವ ಮುಖ್ಯಮಂತ್ರಿಗೆ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಖಚಿತತೆ ಇದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ, ಈ ಚರ್ಚೆ ಕೊಳ್ಳೇಗಾಲದಲ್ಲೇ ನಡೆಯಲಿ. ತಾವು ಸರ್ಕಾರದ ಖಜಾನೆ ಖಾಲಿ ಆಗಿರುವುದನ್ನು, ಸಾಲ ಮಾಡಿರುವುದನ್ನು ಸಾಬೀತು ಪಡಿಸದಿದ್ದರೆ ತಮ್ಮನ್ನು ಬೇರೊಂದು ಹೆಸರಿನಿಂದ ಕರೆಯಲಿ ಎಂದು ಅವರು ಪಂಥಾಹ್ವಾನ ನೀಡಿದರು.
ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುದು ಸಮಂಜಸವಲ್ಲ, ತಿರುವಳ್ಳುವರ್ ಮತ್ತು ಸರ್ವಜ್ಞ ಇಬ್ಬರೂ ಜಾತಿ-ಮತ ಮೀರಿ ಬೆಳೆದವರು. ಈ ದಾರ್ಶನಿಕರನ್ನು ವಿವಾದಕ್ಕೆ ಎಳೆಯಬಾರದು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.