ಮುಜರಾಯಿ ಸಚಿವರಾಗಿದ್ದವರು ನಂತರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಉದಾಹರಣೆಯೇ ಇಲ್ಲ. ಅದೇ ರೀತಿಯಾಗಿ ಮುಜರಾಯಿ ಖಾತೆ ಸಚಿವರಾಗಿ ಗೋವಿಂದರಾಜ ನಗರ ವಿಧಾನಸಭೆ ಉಪ ಚುನಾವಣೆಯ ಅಖಾಡದಲ್ಲಿರುವ ಸಚಿವ ವಿ.ಸೋಮಣ್ಣ ಕೂಡ ಜಯ ಸಾಧಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಮುಜರಾಯಿ ಖಾತೆ ಸಚಿವರಾದ ನಂತರ ಸ್ಪರ್ಧಿಸಿದ ಚುನಾವಣೆಗಳಲ್ಲಿ ನಾಗರಾಜ ಶೆಟ್ಟಿ, ಸುಮಾ ವಸಂತ್, ಎಂ.ಪಿ.ಪ್ರಕಾಶ್, ಮುನಿಯಪ್ಪ ಮುದ್ದಪ್ಪ ಅವರು ಸೋಲು ಕಂಡಿದ್ದಾರೆ. ಇದು ದೇವರ ಮಹಿಮೆ ಎಂದಿರುವ ಅವರು, ಈ ಉಪಚುನಾವಣೆಯಲ್ಲೂ ಅದು ಸಾಬೀತಾಗಲಿದೆ ಎಂದರು.
ಮರುಜನ್ಮ ಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಅಧಿಕಾರ ದಾಹದಿಂದ ಸೋಮಣ್ಣ ಬಿಜೆಪಿಗೆ ಸೇರಿದ್ದಾರೆ. ಅಧಿಕಾರದ ಬೆನ್ನು ಹತ್ತಿ ಹೋಗಿರುವ ಸೋಮಣ್ಣ, ಸ್ವಾಮೀಜಿಗಳು ಹೇಳಿದರು ಎಂದು ಹಿರಿಯರ ಮಾನ ಕಳೆಯುತ್ತಿದ್ದಾರೆ.
ಮರ್ಯಾದಸ್ತರು, ಸ್ವಾಮೀಜಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಮನೆ, ಮನೆಗೆ ತೆರಳಿ ಇದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಿ ಎಂದು ಮೂಡಲಪಾಳ್ಯ ವೃತ್ತದಲ್ಲಿ ಮಂಗಳವಾರ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಡಿಕೆಶಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.