ದೆಹಲಿಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಉಡುಪಿ ಶಾಸಕ ಕೆ.ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ಮತ್ತು ತನ್ನ ನಡುವೆ ಯಾವುದೇ ಅನೈತಿಕ ಸಂಬಂಧ ಇರಲಿಲ್ಲ ಎಂದು ಪ್ರಕರಣದ ಪ್ರಮುಖ ಆರೋಪಿ ಅತುಲ್ ರಾವ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಪತ್ನಿ ಪದ್ಮಪ್ರಿಯಾ ಮತ್ತು ಆರೋಪಿ ಅತುಲ್ ರಾವ್ ಮಧ್ಯೆ ಅನೈತಿಕ ಸಂಬಂಧ ಇತ್ತು ಎಂದು ರಘುಪತಿ ಭಟ್, ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಖಾಸಗಿ ದೂರಿನಲ್ಲಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಆತನ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.
ಜು.29ರಂದು ಸಿಓಡಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ಪದ್ಮಪ್ರಿಯ ಸಾವಿನಲ್ಲಿ ತನ್ನ ಪಾತ್ರ ಇಲ್ಲ ಎಂದು ಸಿಓಡಿ ಪೊಲೀಸರು ಈಗಾಗಲೇ ಆ ಬಗೆಗಿನ ಆರೋಪಗಳನ್ನು ಕೈಬಿಟ್ಟಿದ್ದಾರೆ. ಆದ್ದರಿಂದ ನಿರಾಶರಾಗಿರುವ ಶಾಸಕ ರಘುಪತಿ ಭಟ್, ಪ್ರಕರಣದ ಹಾದಿ ತಪ್ಪಿಸಲು ಮತ್ತು ವಿಚಾರಣೆಯನ್ನು ವಿಳಂಬ ಮಾಡಲು ಪಿತೂರಿ ನಡೆಸುವ ಉದ್ದೇಶದಿಂದ ಈಗ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ ಎಂದು ದೂರಿದರು.
ತಮ್ಮ ಮತ್ತು ಪದ್ಮಪ್ರಿಯಾ ಮಧ್ಯೆ ಅನೈತಿಕ ಸಂಬಂಧ ಇತ್ತು ಎಂದು ಭಟ್ ಸುಳ್ಳು ಹೇಳುತ್ತಿದ್ದಾರೆ ಎಂದು ಅತುಲ್ ರಾವ್ ಆರೋಪಿಸಿದ್ದಾರೆ.